ಇಲ್ಲಿನ ಗ್ರಾಮವೊಂದರಲ್ಲಿ ಎರಡು ವರ್ಷ ಪ್ರಾಯದ ಮಗುವೊಂದು 150 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದ ದಾರುಣ ಘಟನೆ ಗುರುವಾರ ನಡೆದಿದ್ದು, ಮಗುವಿನ ರಕ್ಷಣೆಗಾಗಿ ಭರದಿಂದ ಕಾರ್ಯ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ರಾದಿಂದ 40 ಕಿ.ಮಿ.ದೂರದಲ್ಲಿರುವ ಶಾಮ್‌ಷಾಬಾದ್ ಗ್ರಾಮದಲ್ಲಿನ ಮನೆಯ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ ಆಟವಾಡುತ್ತಿದ್ದ ಮಗು ಸೋನು ತೆರೆದಿದ್ದ ಸುಮಾರು 150ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದಿದೆ.
ಸೋನುವಿನ ರಕ್ಷಣೆಗಾಗಿ ಈಗಾಗಲೇ ಬೋರ್‌ವೆಲ್ ಇಕ್ಕೆಲಗಳಲ್ಲೂ ಹೊಂಡವನ್ನು ತೆಗೆಯುವ ಕಾರ್ಯ ಭರದಿಂದ ಸಾಗಿದೆ.ಆಳದಲ್ಲಿ ಸಿಲುಕಿರುವ ಸೋನುವಿಗೆ ಬಿಸ್ಕೆಟ್ ಮತ್ತು ನೀರನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಆದರೆ ಮಗು ಆಹಾರವನ್ನು ತಿನ್ನುವ ಸ್ಥಿತಿಯಲ್ಲಿದೆಯೇ ಎಂಬ ಖಚಿತ ಮಾಹಿತಿ ಇಲ್ಲ.
ಕಳೆದ ಎರಡು-ಮೂರು ತಿಂಗಳ ಹಿಂದೆ ತೆಗೆದಿದ್ದ ಬೋರ್‌ವೆಲ್ ಅನ್ನು ಮುಚ್ಚದೆ ಹಾಗೇ ಬಿಟ್ಟಿರುವುದಾಗಿ ಆರೋಪಿಸಿರುವ ಸೋನುವಿನ ತಂದೆ,ಮಗುವಿನ ಆಕ್ರಂದನ ಕೇಳಿದಾಗ ಓಡಿಬಂದು ಗಮನಿಸಿದಾಗ ಮಗು ತೆರೆದ ಕೊಳವೆ ಬಾವಿಯೊಳಗೆ ಬಿದ್ದಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ.
ಮಗುವನ್ನು ರಕ್ಷಿಸಲು ನಾವು ಶಕ್ತಿ ಮೀರಿ ಶ್ರಮಿಸುತ್ತಿರುವುದಾಗಿ ಆಗ್ರಾ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಆದರೆ ಮಗು ಬದುಕುಳಿಯುವ ಸಾಧ್ಯತೆ ಬಹುತೇಕ ಕಷ್ಟ ಎಂಬುದಾಗಿ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವರ್ಷದಲ್ಲಿ ಆಗ್ರಾ ಪ್ರದೇಶದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. 2008ರ ಮಾರ್ಚ್ ತಿಂಗಳಲ್ಲಿ 2ರ ಹರೆಯದ ವಂದನಾ ಎಂಬ ಹೆಣ್ಣು ಮಗು ಕೂಡ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದು,ತೀವ್ರ ಕಾರ್ಯಾಚರಣೆ ಮೂಲಕ ಮಗುವನ್ನು ರಕ್ಷಿಸಲಾಗಿತ್ತು. |