ಭುವನೇಶ್ವರ: ಒರಿಸ್ಸಾದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ದಸರಾ ಆಚರಣೆಯ ಸಂದರ್ಭದಲ್ಲಿ ಮಾಲ್ಕಾಂಗಿರಿ ಜಿಲ್ಲೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರು ಹೊಡೆದಾಟಕ್ಕಿಳಿದರು. ಹಿಂಸಾಚಾರದಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಆದರೆ 10ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಗಜಭಿಯೆ ತಿಳಿಸಿದ್ದಾರೆ.
ಶುಕ್ರವಾರ ಏಕಾಏಕಿ ಹೊತ್ತಿಕೊಂಡ ಹಿಂಸಾಚಾರ ಜಿಲ್ಲೆಯ ಪೋಡಿಯಾ ಎಂಬ ಊರಿಗೆ ಹಬ್ಬಿದೆ. ಈ ಹಳ್ಳಿಯ ಮೂಲಗಳ ಪ್ರಕಾರ ಹಿಂಸಾಚಾರದಲ್ಲಿ 17ಮಂದಿ ಗಾಯಗೊಂಡಿದ್ದು, ಇವರಲ್ಲಿ 12ಹಿಂದೂಗಳು ಮತ್ತು ಐವರು ಕ್ರಿಶ್ಚಿಯನ್ನರು ಸೇರಿದ್ದಾರೆನ್ನಲಾಗಿದೆ.
ದಿಢೀರ್ ಹಿಂಸಾಚಾರ ಸಂಭವಿಸಿದ ಪರಿಣಾಮ ಎಚ್ಚೆತ್ತ ಪೊಲೀಸರು ಪೋಡಿಯಾ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಂಧಮಾಲ್ ಜಿಲ್ಲೆಯಲ್ಲಿ ವಿಎಚ್‌ಪಿಯ ಸ್ವಾಮಿ ಲಕ್ಷ್ಮಣಾನಂದ ಅವರ ಹತ್ಯೆಯ ಬಳಿಕ ಕೋಮುಹಿಂಸಾಚಾರ ಭುಗಿಲೆದ್ದಿತ್ತು. ಇತ್ತೀಚೆಗಿನ ಒಂದು ವಾರದಿಂದ ಹಿಂಸಾಚಾರ ನಿಂತಿತ್ತು. ಆದರೆ ಬುಧವಾರದಂದು ಕಂಧಮಾಲ್ ಸಮೀಪದ ಬೌಧ್ ಜಿಲ್ಲೆಯಲ್ಲಿ ಕೆಲವು ದುಷ್ಕರ್ಮಿಗಳು ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದರು. |