ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ ಹಲವು ಬೌದ್ಧ ಭಿಕ್ಷುಗಳ ಸಮ್ಮುಖದಲ್ಲಿ 10 ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಪುಕಾರಣ್ಯ ಗ್ರಾಮದ ಕಾನ್ಪುರದಲ್ಲಿ ನಡೆದ ಬುದ್ಧ ದೀಕ್ಷಾ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ದಲಿತರು ಶುಕ್ರವಾರದಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
ಇಂದಿನಿಂದ ನಾವು ಶ್ರೀರಾಮ ಸೇರಿದಂತೆ ಯಾವುದೇ ಹಿಂದೂ ದೇವ-ದೇವತೆಗಳನ್ನು ಪೂಜಿಸುವುದಿಲ್ಲ. ಆ ನಿಟ್ಟಿನಲ್ಲಿ ನಾವು ಕೇವಲ ಬುದ್ಧನ ತತ್ವಗಳನ್ನು ಮಾತ್ರ ಅನುಸರಿಸುತ್ತೇವೆ. ಇದು ನಮಗೆ ಪುನರ್ ಜನ್ಮ ನೀಡಿದಂತಾಗಿದೆ ಎಂದು ರೂರಾ ಗ್ರಾಮದ ಶಾಕುಂತಲಾ ಕಮಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಸಮಾರಂಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಪಕ್ಷದ ಅಧ್ಯಕ್ಷ ಧಾನಿ ರಾವ್ ಅವರು ಭಾಗವಹಿಸಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ, ವಿಚಾರಧಾರೆಯನ್ವಯ ಬೌದ್ಧ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು. |