ಶ್ರೀನಗರ:ಕಣಿವೆ ನಾಡಿನ ಜನರ ದಶಕಗಳ ಕನಸು ಶುಕ್ರವಾರ ನನಸಾಗಿದ್ದು, ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕಾಶ್ಮೀರ ಕಣಿವೆಯ ಪ್ರಥಮ ರೈಲ್ವೆ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
1998ರಲ್ಲಿ ಕಣಿವೆ ಪ್ರದೇಶದ ಜನರ ರೈಲ್ವೆ ಸೇವೆಯ ಬೇಡಿಕೆ ಈಡೇರಿಕೆಗಾಗಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಆದರೆ ಕುಂಟುತ್ತ ಸಾಗಿದ ಈ ಕಾರ್ಯ ದಶಕಗಳ ಬಳಿಕ ಪೂರ್ಣಗೊಂಡಿದ್ದು, ಇಂದು ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ,ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ ಸೇರಿದಂತೆ ಹಲವಾರ ಗಣ್ಯರು ಕಣಿವೆ ಪ್ರದೇಶದ ವೌಗಾಮ್ ರೈಲ್ವೆ ನಿಲ್ದಾಣದಲ್ಲಿ ಸೇವೆಗೆ ಅಧಿಕೃತ ಚಾಲನೆ ನೀಡಿದರು.
ಸುಮಾರು ಹತ್ತು ವರ್ಷಗಳ ಹಿಂದೆ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಅವರು ಚಾಲನೆ ನೀಡಿದ್ದರು. ಇಂದು ಅಧಿಕೃತವಾಗಿ ಚಾಲನೆಗೊಂಡಿರುವ ರೈಲ್ವೆ ಸೇವೆಯು, ಬುಡ್‌ಗಾಮ್ ಜಿಲ್ಲೆಯ ರಾಜ್‌ವಾಶ್ಶೆರ್ ಸೇರಿದಂತೆ ಸುಮಾರು 66ಕಿ.ಮೀ.ವರೆಗೆ ಸಂಚರಿಸಲಿದೆ. ಪ್ರಯಾಣದರವನ್ನು 15ರೂ.ನಿಗದಿಪಡಿಸಲಾಗಿದೆ ಎಂದು ವಕ್ತಾರರು ಈ ಸಂದರ್ಭದಲ್ಲಿ ತಿಳಿಸಿದರು.
ನಾಳೆ (ಭಾನುವಾರ)ಯಿಂದ ಅಧಿಕೃತವಾಗಿ ರೈಲ್ವೆ ಸೇವೆ ಅಧಿಕೃತವಾಗಿ ಆರಂಭಗೊಳ್ಳಲಿದೆ. ಎಂಟು ಕೋಚ್‌ಗಳನ್ನು ಹೊಂದಿರುವ ರೈಲು ಜನರ ಸೇವೆಗೆ ಸಿದ್ದವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
66ಕಿ.ಮಿ.ದೂರವನ್ನು ಕ್ರಮಿಸಲಿರುವ ಈ ರೈಲ್ವೆ ಸೇವೆಯು ದಿನಕ್ಕೆ ಎರಡು ಬಾರಿ ಎರಡು ಕಡೆಯಿಂದಲೂ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |