ಬಾಲಿವುಡ್ ಬಿಗ್ ಬಿಗೆ ಶನಿವಾರ 67ರ ಹುಟ್ಟುಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಕಳೆದ ರಾತ್ರಿಯಿಂದಲೇ ಕಾಣಿಸಿಕೊಂಡ ಹೊಟ್ಟೆನೋವಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದು ಅಭಿಮಾನಿಗಳಲ್ಲಿ ಆತಂಕ ಮನೆಮಾಡುವಂತಾಗಿದೆ.
ಶುಕ್ರವಾರ ರಾತ್ರಿಯಿಂದಲೇ ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಮಿತಾಬ್ ಬಚ್ಚನ್ ಅವರನ್ನು ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಲ್ಲದೇ ಇಂದು ಬಿಗ್ ಬಿಯ 67ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳ ದಂಡು ಮುಂಬೈನ ಜುಹುವಿನಲ್ಲಿರುವ ಮನೆಯ ಮುಂದೆ ಜಮಾಯಿಸಿದ್ದು, ಮನೆಯ ಸುತ್ತ-ಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಿಗ್ ಬಿ ಆರೋಗ್ಯದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಕುಟುಂಬದ ಸದಸ್ಯರು ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದಾರೆ.
ಅಲ್ಲದೇ ಈಗಾಗಲೇ ಆಸ್ಪತ್ರೆಯ ಮುಂಭಾಗದಲ್ಲಿಯೂ ಅಭಿಮಾನಿಗಳು ಜಮಾಯಿಸಿದ್ದು, ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸಾಗಿದೆ. |