ಗೋವಾ ಬೀಚಿನಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರಿಂದ ಘೋಷಿಸಲ್ಪಟ್ಟ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಮೇಘನಾ ಸುಬೇದಾರ್, ಸಂಬಂಧಿಕರ ಮನೆಯಲ್ಲಿ ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಆಕೆಯ ಹೆತ್ತವರನ್ನು ಸಂತಸದ ಹೊನಲಲ್ಲಿ ತೇಲಿಸಿದೆ.
ತಮ್ಮ 28ರ ಹರೆಯದ ಪುತ್ರಿ ಮರಳಿ ಬಂದಿರುವುದರಿಂದ ಮೇಘನಾ ತಂದೆ-ತಾಯಿಗೆ ಸಂತೋಷಕ್ಕೆ ಪಾರವೇ ಇಲ್ಲ. ತಾನು ಇಷ್ಟು ದಿನ ಪುಣೆಯ ಸಂಬಂಧಿಕರೊಬ್ಬರ ಮನೆಯಲ್ಲಿದ್ದೆ ಎಂದು ಮೇಘನಾ ಛತ್ತೀಸಗಢದಿಂದ ಕರೆ ಮಾಡಿದಾಗ ಈ ವೈದ್ಯ ದಂಪತಿಗೆ ಖುಷಿಯೋ ಖುಷಿ.
ಈ ವಿಷಯವನ್ನು ಪೊಲೀಸ್ ಸಹಾಯಕ ಆಯುಕ್ತ ಬಾಪು ತಾಂಬ್ರೆ ತಿಳಿಸಿದ್ದು, ಆಕೆಯ ಕರೆ ಬಂದ ತಕ್ಷಣ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಪೊಲೀಸ್ ತಂಡವೊಂದು ಪುಣೆಗೆ ತೆರಳಿತ್ತು.
ಕಳೆದ ಏಪ್ರಿಲ್ ತಿಂಗಳಿಂದ ಇದುವರೆಗೆ ಆಕೆ ಎಲ್ಲಿದ್ದಳು ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಗೋವಾದಲ್ಲಿ ಎಟಿಎಂ ಒಂದರಿಂದ ಹಣ ಡ್ರಾ ಮಾಡಲೆಂದು ಹೋದ ಮೇಘನಾ ದಿಢೀರ್ ಆಗಿ ಕಣ್ಮರೆಯಾಗಿದ್ದಳು. ಇದೀಗ ಆಕೆಯ ಹೆತ್ತವರು ಕೂಡ ಪುಣೆಗೆ ಹೊರಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆನೆಸಿಸ್ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಕ್ಕಿದ್ದ ಮೇಘನಾ, ಛತ್ತೀಸಗಢದ ಕೋರ್ಬಾ ಎಂಬಲ್ಲಿಂದ ಏಪ್ರಿಲ್ 10ರಂದು ಕರೆ ಮಾಡಿ, ತಾನು ಗೀತಾಂಜಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮನೆಗೆ ಹೊರಟಿರುವುದಾಗಿ ಹೇಳಿದ್ದಳು. ಆದರೆ ಅಂದು ಆಕೆ ಆ ರೈಲನ್ನೇರಿರಲಿಲ್ಲ. ಆಕೆ ಮನೆಗೆ ಬಾರದಿದ್ದಾಗ ಹೆತ್ತವರು ಏಪ್ರಿಲ್ 11ರಂದು ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದಾಳೆ ಎಂಬ ದೂರು ದಾಖಲಿಸಿದರು. ಆಕೆಯ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು, ಆಕೆ ಏಪ್ರಿಲ್ 13ರಂದು ಮುಂಬಯಿಯ ಅಂಧೇರಿ ಉಪನಗರದ ಎಟಿಎಂಗೆ ಹಾಗೂ ದಕ್ಷಿಣ ಗೋವಾದಲ್ಲಿರುವ ಮರ್ಗೋವಾದಲ್ಲಿ ಏಪ್ರಿಲ್ 14ರಂದು ಎಟಿಎಂಗೆ ಭೇಟಿ ನೀಡಿರುವುದನ್ನು ಪತ್ತೆ ಹಚ್ಚಿದರು.
ಗೋವಾದ ಕಾಂಡೊಲಿಮ್ ಬೀಚಿನಲ್ಲಿ ಕಳೆದ ಜೂನ್ 25ರಂದು ಮಹಿಳೆಯೊಬ್ಬಾಕೆಯ ಕೊಳೆತ ಮೃತದೇಹವೊಂದು ಪತ್ತೆಯಾದಾಗ ಮೇಘನಾಳೇ ಸತ್ತಿದ್ದಾಳೆ ಎಂದು ಭಾವಿಸಲಾಯಿತು. ಮಾತ್ರವಲ್ಲ, ಆಕೆಯ ಸಾವು ಒಂದು ಕೊಲೆ ಪ್ರಕರಣ ಎಂದೂ ಗೋವಾದಲ್ಲಿ ಕೇಸು ದಾಖಲಿಸಲಾಯಿತು. ಆದರೂ, ಆ ಶವವು ತಮ್ಮ ಮಗಳದ್ದೇ ಆಗಿತ್ತೇ ಇಲ್ಲವೇ ಎಂಬ ಕುರಿತು ಹೆತ್ತವರ ಮನದ ಮೂಲೆಯಲ್ಲೆಲ್ಲೋ ಸಂಶಯ ಸುಳಿದಾಡುತ್ತಲೇ ಇತ್ತು.
ಆದರೆ, ಆ ಬಳಿಕ ಡಿಎನ್ಎ ಪರೀಕ್ಷೆ ಮಾಡಿಸಲಾಗಿ, ಅದು ಬೇರೊಬ್ಬರ ಶವ ಎಂಬುದು ಖಚಿತಗೊಂಡಿತ್ತು.
ಇದೀಗ ಆಕೆ ಜೀವಂತವಾಗಿದ್ದಾಳೆ ಮತ್ತು ಪುಣೆಯಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಾಳೆ ಎಂಬುದು ದೃಢಪಟ್ಟಿದೆ. ಎಲ್ಲಿದ್ದಳು, ಏನಾಗಿದ್ದಳು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ದೊರೆಯಬೇಕಿದೆ. |