ಇಲ್ಲಿನ ಲೆಹರಕಾಪುರದಲ್ಲಿ ಕಳೆದ ಮೂರು ದಿನಗಳ ಹಿಂದೆ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಎರಡೂವರೆ ವರ್ಷದ ಮಗ ಸೋನು ಬದುಕಿರುವ ಸಾಧ್ಯತೆ ಕಡಿಮೆ ಎಂಬುದಾಗಿ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಆಗ್ರಾದಿಂದ 5ಕಿ.ಮಿ.ದೂರದಲ್ಲಿರುವ ಶಾಮ್‌ಷಾಬಾದ್ ಗ್ರಾಮದಲ್ಲಿನ ಮನೆಯ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ ಆಟವಾಡುತ್ತಿದ್ದ ಮಗು ಸೋನು ತೆರೆದಿದ್ದ ಸುಮಾರು 150ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದಿತ್ತು.
ಸೋನುವಿನ ರಕ್ಷಣೆಗಾಗಿ ಈಗಾಗಲೇ ಬೋರ್‌ವೆಲ್ ಇಕ್ಕೆಲಗಳಲ್ಲೂ ಹೊಂಡವನ್ನು ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಆಳದಲ್ಲಿ ಸಿಲುಕಿರುವ ಸೋನುವಿಗೆ ಬಿಸ್ಕೆಟ್ ಮತ್ತು ನೀರನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದೀಗ ಸೇನೆ ಹಾಗೂ ಪೊಲೀಸರು ಕಳೆದ 50ಕ್ಕೂ ಹೆಚ್ಚು ಗಂಟೆಗಳ ಜಂಟಿ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಸೋನುವಿನ ಸಮೀಪ ತಲುಪಲು ಸಾಧ್ಯವಾಗಿಲ್ಲ. ಕೊಳವೆ ಬಾವಿ ಇಕ್ಕೆಲಗಳಲ್ಲಿ ತೋಡುತ್ತಿದ್ದ ಹೊಂಡದಲ್ಲಿ ಜಲ ಕಾಣಿಸಿಕೊಂಡ ಪರಿಣಾಮ ಶೀಘ್ರ ಕಾರ್ಯಕ್ಕೆ ತೊಡಕು ಉಂಟಾಗುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕೊಳವೆ ಮೂಲಕ ಸೋನುವಿಗೆ ಆಮ್ಲಜನಕ ಸರಬರಾಜು ಮಾಡುವ ಕಾರ್ಯವನ್ನು ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಕಳೆದ ಒಂದು ದಿನದಿಂದ ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು,ಮಗು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |