ದುರ್ಗಾದೇವಿಯ ಪ್ರಸಾದವನ್ನು ಕೇಳಿದ ದಲಿತ ವ್ಯಕ್ತಿಯನ್ನು ಸಾರ್ವಜನಿಕವಾಗಿಯೇ ಮೇಲ್ವರ್ಗದ ಗುಂಪು ಗುಂಡು ಹೊಡೆದು ಹತ್ಯೆಗೈದು ಅಮಾನವೀಯ ಘಟನೆ ಇಲ್ಲಿನ ನಾಲಂದಾ ಜಿಲ್ಲೆಯ ಜಿಯಾರಾ ಗ್ರಾಮದಲ್ಲಿ ನಡೆದಿದೆ.
ದಲಿತ ಸಮುದಾಯದ ಕರು ಪಾಸ್ವಾನ್ ಎಂಬಾತ ದೇವಿಯ ಪ್ರಸಾದವನ್ನು ನೀಡುವಂತೆ ಯಾಚಿಸಿದ್ದ,ಆದರೆ ಪ್ರಸಾದವನ್ನು ಕೊಡಲು ಮೇಲ್ವರ್ಗದ ಸಮುದಾಯ ನಿರಾಕರಿಸಿದ ನಂತರ ಶನಿವಾರ ರಾತ್ರಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು.
ಮೇಲ್ವರ್ಗದ ರತನ್ ಸಿಂಗ್ ದಲಿತ ಸಮುದಾಯದ ಮೇಲೆ ಆಕ್ರೋಶಿತನಾಗಿ ಗನ್‌ನಿಂದ ಗುಂಡು ಹಾರಿಸಿದ ಪರಿಣಾಮ ಪಾಸ್ವಾನ್ ಸೇರಿದಂತೆ ಮೂರು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು,ಪಾಸ್ವಾನ್ ಅವರನ್ನು ಪಾಟ್ನಾ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ರತನ್ ಸಿಂಗ್ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಕೋಮುಘರ್ಷಣೆ ತಡೆಯುವ ನಿಟ್ಟಿನಲ್ಲಿ ಪ್ರದೇಶದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. |