ತನ್ನ ಆರೋಗ್ಯ ಸುಧಾರಿಸುತ್ತಿದ್ದು,ಇನ್ನೂ ಕೆಲವೇ ದಿನಗಳಲ್ಲಿ ಇಲ್ಲಿನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಆಸ್ಪತ್ರೆಯ ಮೂಲಗಳು ಭಾನುವಾರ ತಿಳಿಸಿದೆ.
ಶನಿವಾರ ತಮ್ಮ 66ನೇ ಹುಟ್ಟುಹಬ್ಬದ ದಿನದಂದೇ ತೀವ್ರ ತೆರನಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗಾಗಲೇ ಅಮಿತಾಬ್ ಅವರ ರಕ್ತ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನ್ ಮಾಡಲಾಗಿದ್ದು,ಭಾನುವಾರ ಮಧ್ನಾಹ್ನ ಪರೀಕ್ಷೆಯ ವರದಿ ಪಡೆದ ಬಳಿಕ, ಆಸ್ಪತ್ರೆಯಿಂದ ಬಿಡುಗಡೆಯಾಗುವ ಕುರಿತು ನಿರ್ಧರ ಕೈಗೊಳ್ಳಲಾಗುವುದು ಎಂದು ಬಿಗ್ ಬಿ ತಿಳಿಸಿರುವುದಾಗಿ ಅವರ ವಕ್ತಾರ ಹೇಳಿದ್ದಾರೆ.
ವೈದ್ಯರ ಚಿಕಿತ್ಸೆಗೆ ಬಚ್ಚನ್ ಅವರು ದೈಹಿಕವಾಗಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು,ಅವರನ್ನು 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಪರೀಕ್ಷೆಗಾಗಿ ಇರಿಸಲಾಗಿದೆ.ಯಾವುದೇ ಆತಂಕ ಬೇಡ ಎಂದು ಶನಿವಾರ ಬಚ್ಚನ್ ಪುತ್ರ ಅಭಿಷೇಕ್ ತಿಳಿಸಿದ್ದರು.
ಪತ್ನಿ ಜಯಾ ಬಚ್ಚನ್, ಮಗಳು ಶ್ವೇತಾ ನಂದಾ, ಸೊಸೆ ಐಶ್ವರ್ಯ ರೈ ಮತ್ತು ಕುಟುಂಬದ ಸದಸ್ಯರು, ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅವರು ಲೀಲಾವತಿ ಆಸ್ಪತ್ರೆಗೆ ತೆರಳಿ ಬಚ್ಚನ್ ಆರೋಗ್ಯದ ಕುರಿತು ವಿಚಾರಿಸಿದರು. |