ಕಳೆದ ಗುರುವಾರ ತೆರೆದ ಕೊಳವೆ ಬಾವಿಗೆ ಬಿದ್ದ ಎರಡರ ಹರೆಯದ ಮಗು ಸೋನುವನ್ನು ಕೊಳವೆಯಿಂದ ಮೇಲೆತ್ತಲಾಗಿದೆಯಾದರೂ ಆತನನ್ನು ಉಳಿಸಿಕೊಳ್ಳಲಾಗಿಲ್ಲ.
ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಸೋಮವಾರ ಮುಂಜಾನೆ ಆತನನ್ನು ಕೊಳವೆಯಿಂದ ಮೇಲೆತ್ತಲಾಗಿತ್ತು. ಕೂಡಲೇ ಆತನನ್ನು ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಪ್ರಜಾಪತಿ ಅವರು ಸೋನು ಬದುಕುಳಿದಿರುವ ಯಾವುದೇ ಲಕ್ಷಣಗಳಿಲ್ಲ ಎಂದು ದೃಢಪಡಿಸಿದರು.
ಸೋಮವಾರ 11.20ರ ವೇಳೆಗೆ ಸೇನಾ ತಂಡವು ಕೊಳವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಗುವನ್ನು ಮೇಲೆತ್ತಿತ್ತು.
150 ಅಡಿ ಆಳದ ಕೊಳವೆಬಾವಿಗೆ ಗುರುವಾರ ಸುಮಾರು 9.45ರ ವೇಳೆಗೆ ಸೋನು ಬಿದ್ದಿದ್ದ. ಆಗ್ರಾದಿಂದ 26 ಕಿ.ಮೀ ದೂರದಲ್ಲಿರುವ ಶಾಮ್ಸ್‌ಬಾದ್ ಪಟ್ಟಣದ ಲೆಹ್ರಾಕಪುರ ಗ್ರಾಮದಲ್ಲಿ, ತನ್ನ ಮನೆಯ ಹೊರಗಡೆ ಆಟವಾಡುತ್ತಿದ್ದ ವೇಳೆಗೆ ಆತ ಕೊಳವೆಗೆ ಬಿದ್ದಿದ್ದ.
ಮೂರು ತಿಂಗಳ ಹಿಂದೆ ಕೊರೆಯಲಾಗಿದ್ದ ಕೊಳವೆ ಬಾವಿಯನ್ನು ಹಾಗೆಯೇ ಬಿಡಲಾಗಿತ್ತು. ಇದರಿಂದಾಗಿ ದುರಂತ ಸಂಭವಿಸಿದೆ. |