ಸೋನಿಯಾ ಗಾಂಧಿಯವರ ಕನಸಿನ ಕೂಸಾದ ಲಾಲ್‌ಗಂಜ್ ರೈಲ್ವೇ ಫ್ಯಾಕ್ಟರಿ ಯೋಜನೆಗೆ 189.25 ಹೆಕ್ಟೇರ್ ಜಾಗ ಮಂಜೂರಾತಿಯ ಆದೇಶವನ್ನು ಉತ್ತರ ಪ್ರದೇಶ ಸರಕಾರ ಹಿಂತೆಗೆಯುವ ಮೂಲಕ ಮಾಯಾ-ಸೋನಿಯಾ ರಾಜಕೀಯ ಯುದ್ಧ ತಾರಕಕ್ಕೇರಿದೆ.
ಸೋನಿಯಾ ಗಾಂಧಿಯವರ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ ಸ್ಥಾಪಿಸಲುದ್ದೇಶಿಸಲಾಗಿದ್ದ ಯೋಜನೆಗೆ ಭೂಮಿ ಮಂಜೂರು ಮಾಡಿದ್ದ ಆದೇಶವನ್ನು ಮಾಯಾವತಿ ಸರಕಾರ ಭಾನುವಾರ ಹಿಂತೆಗೆದುಕೊಂಡಿದೆ.
ಅಕ್ಟೋಬರ್ 14ರಂದು ಭೂಮಿಪೂಜೆ ನಡೆಸಲು ಸೋನಿಯಾ ಗಾಂಧಿ ತಯಾರಿ ನಡೆಸುತ್ತಿರುವಂತೆ, ಇದಕ್ಕಾಗಿ ಮಂಜೂರು ಮಾಡಿದ್ದ ಭೂಮಿಯನ್ನು ಸರಕಾರ ಮರಳಿ ಗ್ರಾಮ ಸಭಾಕ್ಕೆ ಹಿಂತಿರುಗಿಸಿದ್ದು, ಈ ಯೋಜನೆಗೆ ಪರ್ಯಾಯ ಭೂಮಿಯನ್ನು ಹುಡುಕಲು ರಾಯ್‌ಬರೇಲಿ ಜಿಲ್ಲಾ ಮ್ಯಾಜೆಸ್ಟ್ರೀಟ್ ಅವರಿಗೆ ನಿರ್ದೇಶನ ನೀಡಲಾಗಿದೆ. ಯೋಜನೆಗಾಗಿ ಗ್ರಾಮಸಭಾದ ಜಾಗವನ್ನು ಈ ಹಿಂದೆ ಮಂಜೂರು ಮಾಡಲಾಗಿತ್ತು.
ಭೂಮಿ ಕಳೆದುಕೊಳ್ಳುವ ಜನತೆಯು ಸಿಟ್ಟಿಗೆದ್ದಿದ್ದು, ಪರಿಸ್ಥಿತಿಯು ಯಾವ ಕ್ಷಣದಲ್ಲೂ ಸ್ಫೋಟಗೊಳ್ಳಬಹುದು ಎಂಬ ರಾಯ್‌ಬರೇಲಿ ಜಿಲ್ಲಾ ಮ್ಯಾಜೆಸ್ಟ್ರೀಟ್ ಅವರ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಯಾವತಿಯವರ ಪ್ರಧಾನ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ತಿಳಿಸಿದ್ದಾರೆ.
ಸರಕಾರದ ಈ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕರು, ಮಾಯಾವತಿ ಅವರು ಔದ್ಯಮಿಕವಾಗಿ ಹಿಂದುಳಿದಿರುವ ರಾಜ್ಯದಲ್ಲಿ ರೈಲ್ ಕೋಚ್ ನಿರ್ಮಾಣ ಘಟಕದ ಆರಂಭವನ್ನು ವಂಚಿಸುತ್ತಿದ್ದಾರೆ ಎಂದು ದೂರಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಚಳುವಳಿ ಹೂಡುವ ಬೆದರಿಕೆ ಹಾಕಿದ್ದಾರೆ. |