ಕರ್ನಾಟಕ ಮತ್ತು ಒರಿಸ್ಸಾದಲ್ಲಿ ನಡೆದಿರುವ ಕೋಮು ಹಿಂಸಾಚಾರ "ಅತ್ಯಂತ ಕಳವಳಕಾರಿ ಮತ್ತು ಅಪಾಯಕಾರಿ" ಎಂದು ಪ್ರಧಾನಿ ಮನಮೋಹನ್ ಸಿಂಗ್ ಬಣ್ಣಿಸಿದ್ದಾರಲ್ಲದೆ, ಕೋಮು ಸೌಹಾರ್ದ, ಏಕತೆ ಮತ್ತು ಶಾಂತಿಯುತ ಸಹಜೀವನಕ್ಕೆ ಭಂಗ ಉಂಟುಮಾಡುವವರು "ಕಠಿಣತಮ ಶಿಕ್ಷೆ"ಗೆ ಅರ್ಹರು ಎಂದು ಹೇಳಿದ್ದಾರೆ.
ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸಮನ್ವಯ ಮಂಡಳಿ (ಎನ್ಐಸಿ) ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು.
ಇಂದು ನಾವೆದುರಿಸುತ್ತಿರುವ ಅತ್ಯಂತ ಕಳವಳಕಾರಿ ಮತ್ತು ಅಪಾಯಕಾರಿ ಅಂಶವೆಂದರೆ ದೇಶದ ಬಹುಸಂಸ್ಕೃತಿಯ ಮೇಲಾಗುತ್ತಿರುವ ದಾಳಿ ಎಂದ ಸಿಂಗ್, ಇಂದು ಸಮುದಾಯಗಳ ಮಧ್ಯೆ ದ್ವೇಷದ ಅಡ್ಡಗೋಡೆ ಬೆಳೆಯುತ್ತಿದೆ ಎಂದರು. ಜನಾಂಗೀಯ ಮತ್ತು ಕೋಮು ಹಿಂಸಾಚಾರದಂತಹ ವಿಷಯಗಳನ್ನು ಹತ್ತಿಕ್ಕಲು ದೇಶದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಇಂತಹ ಪ್ರಯತ್ನಗಳನ್ನು ತನ್ನ ಪ್ರಜಾಸತ್ತಾತ್ಮಕ ಅಡಿಪಾಯವನ್ನು ರಕ್ಷಿಸುವ ಉದ್ದೇಶ ಹೊಂದಿರುವ ರಾಜ್ಯಗಳು ಸಂಪೂರ್ಣ ಅಧಿಕಾರ ಪ್ರಯೋಗಿಸಿ ತಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ದಿನವಿಡೀ ನಡೆಯಲಿರುವ ರಾಷ್ಟ್ರೀಯ ಸಮನ್ವಯ ಮಂಡಳಿ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿದ್ದಾರೆ. |