ಅಸ್ಸಾಂನಲ್ಲಿ ಇತ್ತೀಚೆಗೆ ನಡೆದಿರುವ ಹಿಂಸಾಚಾರಕ್ಕೆ ಸ್ಥಳೀಯ ಬುಡಕಟ್ಟು ಉಗ್ರವಾದಿ ಸಂಘಟನೆಯಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ) ಕಾರಣವೆಂದು ದೂರಿರುವ ಅಸ್ಸಾಂನ ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗೊಗೊಯ್, ಹಿಂಸಾಚಾರದಲ್ಲಿ ಬಾಂಗ್ಲಾದೇಶೀ ನುಸುಳುಕೋರರ ಯಾವುದೇ ಕೈವಾಡವಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.
ಇದೇ ವೇಳೆ, ಹಿಂಸಾಚಾರ ಪೀಡಿತ ಪ್ರದೇಶದ ಪರಿಶೀಲನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶಕೀಲ್ ಅಹ್ಮದ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ಅಸ್ಸಾಂಗೆ ಕಳುಹಿಸಿದ್ದಾರೆ.
ಉದಲ್‌ಗುರಿ ಮತ್ತು ದರಾಂಗ್ ಜಿಲ್ಲೆಗಳಲ್ಲಿ ನಡೆದ ಘರ್ಷಣೆ ಮತ್ತು ಬೋಡೋ ಹಳ್ಳಿಯೊಂದರಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ, ಆದರೆ ಬಾಂಗ್ಲಾ ದೇಶೀ ನುಸುಳುಕೋರರು ಇದರಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಎನ್‌ಡಿಎಫ್‌ಬಿ ಕೈವಾಡವಿರುವ ಬಗ್ಗೆ ಆರೋಪಗಳಿದ್ದು, ಅದು ಸಾಬೀತಾದರೆ ಅದರ ಜತೆಗಿನ ಕದನವಿರಾಮ ಮುರಿಯುವುದಾಗಿ ಅವರು ತಿಳಿಸಿದರು.
ರಾಜ್ಯ ಸರಕಾರದ ವಕ್ತಾರ ಹಾಗೂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮಾ ಅವರು ಕೂಡ ತನ್ನ ಭಾಗೀದಾರಿಯನ್ನು ನಿರಾಕರಿಸುತ್ತಲೇ ಬಂದಿರುವ ಎನ್‌ಡಿಎಫ್‌ಬಿ ವಿರುದ್ಧವೇ ಆರೋಪ ಮಾಡಿದ್ದು, ಎನ್‌ಡಿಎಫ್‌ಬಿ ಕೇಂದ್ರ ಸರಕಾರಕ್ಕೆ ಸೆ.20ರಂದು ಸಲ್ಲಿಸಿದ್ದ ತಮ್ಮ ಬೇಡಿಕೆಗಳ ಪಟ್ಟಿಯಲ್ಲಿ "ಬುಡಕಟ್ಟು ಜನರಲ್ಲದ ಮತ್ತು ಅಕ್ರಮ ವಲಸಿಗರನ್ನು ಬೋಡೋಲ್ಯಾಂಡ್‌ನ ಅತಿಕ್ರಮಣಕಾರರು ಎಂದು ಘೋಷಿಸಬೇಕು" ಎಂದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಬೋಡೋ ಜನರು ತಮ್ಮನ್ನು ಇಲ್ಲಿಂದ ಹೊರಹೋಗುವಂತೆ ಕೆಲವು ಸಮಯಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ ಎಂದು ಸ್ಥಳೀಯ ನಿರಾಶ್ರಿತ ಶಿಬಿರದಲ್ಲಿರುವ ಮುಸ್ಲಿಮರು ದೂರಿದ್ದಾರೆ.
ಆದರೆ ಇದು ತಮ್ಮ ಹೆಸರಿಗೆ ಮಸಿ ಬಳಿಯುವ ಸರಕಾರೀ ಸಂಚು ಎಂದು ಎನ್‌ಡಿಎಫ್‌ಬಿ ಆರೋಪಿಸಿದೆ. ಈದ್ ಮರುದಿನವೇ ಬಾಂಗ್ಲಾ ವಲಸಿಗರು ಹಳ್ಳಿಯ ಮೇಲೆ ದಾಳಿ ಮಾಡಿದ ಸಂದರ್ಭ ಹಿಂಸಾಚಾರ ಆರಂಭವಾಗಿತ್ತು ಎಂದು ಇತರರು ಹೇಳುತ್ತಾರೆ. ತಮ್ಮ ಹಳ್ಳಿಯನ್ನು ರಕ್ಷಿಸುವ ಸಲುವಾಗಿ ತಾವು ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದಾಗಿ ಈ ಸಂಘಟನೆಯ ಕೆಲವು ಸದಸ್ಯರು ಹೇಳಿದ್ದಾರೆ.
ಎಎಎಸ್‌ಯು ಹಾಗೂ ಎಬಿಎಸ್‌ಯು (ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್) ಕೂಡ ಬಾಂಗ್ಲಾ ವಲಸಿಗರೇ ಹಿಂಸಾಚಾರ ನಡೆಸಿದರು ಎಂದು ದೂರಿವೆ. |