ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಸೇವೆಗಳಲ್ಲಿ ಕ್ರೈಸ್ತರಿಗಾಗಿ ನೀಡಲಾಗಿದ್ದ ಶೇ.3.5ರಷ್ಟು ವಿಶೇಷ ಮೀಸಲಾತಿಯನ್ನು ಹಿಂತೆಗೆಯಲು ತಮಿಳ್ನಾಡು ಸರಕಾರ ಸೋಮವಾರ ನಿರ್ಧರಿಸಿದೆ.ಈ ವಿಶೇಷ ಮೀಸಲಾತಿಯಿಂದಾಗಿ ಸಮುದಾಯವು ಕೆಲವು ಅನುಕೂಲಗಳನ್ನು ಪಡೆಯುವುದರಿಂದ ವಂಚಿತವಾಗಿದೆ ಎಂದು ಸಮುದಾಯದ ಪ್ರಾತಿನಿಧಿತ್ವವು ಹೇಳಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.ಮೈಲಾಪುರದ ಆರ್ಚ್ ಬಿಷಪ್ ರೆವರೆಂಡ್ ಫಾದರ್ ಚಿನ್ನಪ್ಪ ನೇತೃತ್ವದ ಕ್ರಿಶ್ಚಿಯನ್ ನಾಯಕರ ನಿಯೋಗ ಒಂದು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಸೋಮವಾರ ಭೇಟಿಯಾಗಿದ್ದು, ವಿಶೇಷ ಮೀಸಲಾತಿಯಿಂದಾಗಿ, ಹಿಂದುಳಿದ ಸಮುದಾಯದ ಮೀಸಲಾತಿಯಡಿ ಸಮುದಾಯವು ಪಡೆಯುತ್ತಿದ್ದ ಕೆಲವು ಸವಲತ್ತುಗಳಿಂದ ವಂಚಿತವಾಗಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಧಿಕೃತ ಹೇಳಿಕೆ ತಿಳಿಸಿದೆ.ಈ ವಿಶೇಷ ಮೀಸಲಾತಿಯು, ಕಾಲೇಜುಗಳು ಮತ್ತು ಸರಕಾರಿ ಸೇವೆಗಳಲ್ಲಿ ಸೇರ್ಪಡೆಯಾಗುವ ಸಂಖ್ಯೆಯನ್ನು ಕಡಿತಗೊಳಿಸಿದೆ ಎಂದು ಹೇಳಿರುವ ಮುಖಂಡರು, ಹಿಂದಿನ ಪದ್ಧತಿಯಂತೆ ಹಿಂದುಳಿದ ವರ್ಗಗಳಡಿ ಕ್ರಿಶ್ಚಿಯನ್ನರಿಗೆ ಮೀಸಲಾತಿಯನ್ನು ಮರುಸ್ಥಾಪಿಸುವಂತೆ ವಿನಂತಿಸಿದ್ದಾರೆ.ಕ್ರಿಶ್ಚಿಯನ್ ಮುಖಂಡರ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಯವರು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಮೀಸಲಾತಿ ನೀಡಿರುವ ಕಾಯ್ದೆಯಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದು, ಹಳೆಪದ್ಧತಿಯನ್ನು ಮರುಸ್ಥಾಪಿಸುವಂತೆ ಕಾನೂನಿಗೆ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ. ಅದಾಗ್ಯೂ, ವಿಶೇಷ ಮೀಸಲಾತಿಯಡಿ ಮುಸ್ಲಿಮರಿಗೆ ನೀಡಿರುವ ಶೇ.3.5ರ ಮೀಸಲಾತಿ ಮುಂದುವರಿಯಲಿದೆ.ರಾಜ್ಯದಲ್ಲಿ ಪ್ರಸ್ತುತ ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ಇದೆ. ಇದರಲ್ಲಿ ಶೇ. 20ರಷ್ಟು ಅತ್ಯಂತ ಹಿಂದುಳಿದ ವರ್ಗಗಳಿಗೆ. ಉಳಿದ ಶೇ.30ರಷ್ಟು ಹಿಂದುಳಿದ ವರ್ಗಗಳಲ್ಲಿ ಶೇ.7ರಷ್ಟನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳಿಗೆ ಸಮವಾಗಿ ಶೇ.3.5ರಷ್ಟು ವಿಶೇಷ ಮೀಸಲಾತಿಯನ್ನು ಈ ವರ್ಷದ ಆದಿಯಲ್ಲಿ ನೀಡಲಾಗಿತ್ತು. |
|