ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ರಾಯ್ ಬರೇಲಿ ಕ್ಷೇತ್ರದ ರೈಲ್ವೆ ಬೋಗಿ ತಯಾರಿಕಾ ಫ್ಯಾಕ್ಟರಿಗೆ ನಿಗದಿಪಡಿಸಿದ್ದ ಭೂಮಿ ಮಂಜೂರು ಆದೇಶ ವಾಪಸ್ ಪಡೆದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ನಿರ್ಧಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಸೋನಿಯಾ ಗಾಂಧಿಯವರ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ ಸ್ಥಾಪಿಸಲುದ್ದೇಶಿಸಲಾಗಿದ್ದ ಯೋಜನೆಗೆ ಭೂಮಿ ಮಂಜೂರು ಮಾಡಿದ್ದ ಆದೇಶವನ್ನು ಮಾಯಾವತಿ ಸರಕಾರ ಭಾನುವಾರ ಹಿಂತೆಗೆದುಕೊಂಡಿತ್ತು.
ಈ ವಿವಾದಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ಮಾಯಾವತಿ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು,4ವಾರಗಳ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿದೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರು ಈ ಮಹತ್ವದ ಯೋಜನೆಗೆ ಮಂಗಳವಾರ ನಿಗದಿಯಂತೆ ಚಾಲನೆ ನೀಡಬೇಕಾಗಿತ್ತು. ಆದರೆ ಮಾಯಾವತಿ ಅವರ ಈ ಕ್ರಮದಿಂದಾಗಿ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಭೂಮಿ ಕಳೆದುಕೊಳ್ಳುವ ಜನತೆಯು ಸಿಟ್ಟಿಗೆದ್ದಿದ್ದು, ಪರಿಸ್ಥಿತಿಯು ಯಾವ ಕ್ಷಣದಲ್ಲೂ ಸ್ಫೋಟಗೊಳ್ಳಬಹುದು ಎಂಬ ರಾಯ್‌ಬರೇಲಿ ಜಿಲ್ಲಾ ಮ್ಯಾಜೆಸ್ಟ್ರೀಟ್ ಅವರ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಯಾವತಿಯವರ ಪ್ರಧಾನ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ತಿಳಿಸಿದ್ದಾರೆ.
ರೈಲ್ವೆ ಫ್ಯಾಕ್ಟರಿಗೆ ಭೂಮಿ ಮಂಜೂರು ಮಾಡಿರುವುದರಿಂದ ರೈತರಿಗೆ ಮತ್ತು ಕಾನೂನು ಸಂಬಂಧಿ ತೊಡಕು ಇರುವುದರಿಂದ ಆದೇಶವನ್ನು ಮಾಯಾವತಿ ವಾಪಸ್ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಮತ್ತು ಮಾಯಾವತಿ ನಡುವೆ ಕದನಕ್ಕೆ ಕಾರಣವಾಗಿದೆ. |