ವರದಕ್ಷಿಣೆ ರೂಪದಲ್ಲಿ ನೀಡಿದ ಮೋಟಾರ್ ಬೈಕ್ ತನ್ನಿಷ್ಟದ್ದೇ ಆಗಬೇಕೆಂದು ಹಠಹಿಡಿದ ವರ ಮಹಾಶಯನೊಬ್ಬ, ಮದುವೆ ಮಂಟಪದಿಂದ ಬರಿಗೈಲಿ ಹಿಂತಿರುಗಿದ ಕುತೂಹಲಕಾರಿ ಘಟನೆಯೊಂದು ಶಿವಪುರಿಯ ನಾರ್ವಾರ್ ಪಟ್ಟಣದಲ್ಲಿ ಸಂಭವಿಸಿದೆ.
ರಿಯಾಜ್ ಅಹ್ಮದ್ ಎಂಬವರ ಪುತ್ರಿ ನಿಕ್ಕಿಯ ನಿಕಾ ಶನಿವಾರವೆಂದು ನಿಗದಿಯಾಗಿತ್ತು. ಗ್ವಾಲಿಯರ್‌ನ ಬಿತಾರ್ವಾರ್‌ನ ಇಕ್ಬಾಲ್ ಖಾನ್ ಎಂಬಾತನೊಂದಿಗೆ ನಿಖಾ ನಿರ್ಧಾರವಾಗಿತ್ತು. ಅಂತೆಯೇ ವಿವಾಹಕ್ಕಾಗಿ ವರನ ದಿಬ್ಬಣ ತನ್ನ ಬಂಧುಮಿತ್ರರೊಂದಿಗೆ ಆಗಮಿಸಿತ್ತು ಕೂಡ.
ವರದಕ್ಷಿಣೆ ರೂಪದಲ್ಲಿ ನೀಡಲಾಗಿದ್ದ ಬೈಕ್ ಖಾನ್‌ಗೆ ಇಷ್ಟವಾಗಿಲ್ಲ. ತನ್ನಿಷ್ಟದ ಮೋಟಾರ್ ಬೈಕ್ ಬೇಕೇ ಬೇಕಂದು ಹಠ ಹಿಡಿದ ಆತ, ಇಲ್ಲವಾದರೆ ಮದುವೆ ರದ್ದು ಪಡಿಸುವುದಾಗಿ ಬೆದರಿಕೆ ಹಾಕಿದ.
ವರನ ದುರಾಸೆ ಕಂಡು ರೋಸಿದ ವಧುವಿನ ಸಹನೆಯ ಕಟ್ಟೆ ಒಡೆಯಿತು. "ನೀನೇನು ಮದುವೆ ರದ್ದು ಪಡಿಸಬೇಕಿಲ್ಲ, ನಾನೇ ನಿನ್ನನ್ನು ವರಿಸಲಾರೆ" ಎಂಬಂತೆ ಖಾನ್ ಜತೆ ನಿಖಾವನ್ನು ನಿಕ್ಕಿ ನಿರಾಕರಿಸಿದಳು.
ನಿಕ್ಕಿಯ ಈ ನಿರ್ಭಿಡೆಯ ನಡೆಯನ್ನು ಆಕೆಯ ಸಂಬಂಧಿಗಳು ಬೆಂಬಲಿಸಿದರು. ಹುಡುಗಿಯ ಧೈರ್ಯವನ್ನು ಮೆಚ್ಚಿದ, ಮದುವೆಗೆ ಆಗಮಿಸಿದ್ದ ಯುವಕ ಪರ್ವೇಜ್ ಎಂಬಾತ ನಿಕ್ಕಿಯನ್ನು ವರಿಸಲು ಮುಂದೆ ಬಂದಿದ್ದು, ಪ್ರಕರಣ ಅಚ್ಚರಿಯ ತಿರುವಿನೊಂದಿಗೆ ಸಿನಿಮೀಯ ಅಂತ್ಯ ಕಂಡಿತು ಎಂಬುದಾಗಿ ವರದಿ ಹೇಳಿದೆ. |