ಮದುವೆಯಾದರೆ ಗಂಡ-ಹೆಂಡತಿ ಜಗಳ ತಪ್ಪಿದ್ದಲ್ಲ ಎಂಬ ಕೊಂಕು ನುಡಿ ಕೇಳಿರಬಹುದು. ಅದನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಆಲಪ್ಪುರದ ನವದಂಪತಿ. ವಿವಾಹ ಬಂಧನಕ್ಕೆ ಸಿಲುಕಿದ ಕೆಲವೇ ಕ್ಷಣಗಳಲ್ಲಿ ವಾಗ್ವಾದ ಉಂಟಾಗಿ, ವರ ಮಹಾಶಯ ನಾಪತ್ತೆಯಾಗಿದ್ದರೆ, ವಧು ಆಸ್ಪತ್ರೆ ಸೇರಿದ ಪ್ರಸಂಗವೊಂದು ಆಲಪ್ಪುರದಲ್ಲಿ ನಡೆದಿದೆ.
ರಾಜೇಶ್ ಮತ್ತು ಬಿಂದು ಎಂಬಿಬ್ಬರು ಪ್ರೀತಿಸಿ ಮದುವೆಯಾದವರು. ಸೋಮವಾರ ಅವರಿಬ್ಬರೂ ನೋಂದಾಯಿತ ವಿವಾಹ ಮಾಡಿಕೊಂಡರು. ನಂತರ ವರ ಮಹಾಶಯ ತನ್ನ ಪ್ರೀತಿಯ ವಧುವನ್ನು ಆಭರಣದಂಗಡಿಗೆ ಕರೆದೊಯ್ದು ಆಕೆಗೆ ಚಿನ್ನಾಭರಣ ಖರೀದಿಸಿಕೊಟ್ಟ. ಆದರೆ ಅದೇನಾಯಿತೋ, ಅಂಗಡಿಯಿಂದ ಹೊರಬಂದು ಮನೆ ದಾರಿ ಹಿಡಿದಾಗ ಅವರಿಬ್ಬರ ಮಧ್ಯೆ ಜಗಳ ಆರಂಭವಾಯಿತು.
ಕೋಪೋದ್ರಿಕ್ತನಾದ ವರ ಮಹಾಶಯ, ಆಗಷ್ಟೇ ಖರೀದಿಸಿದ ಆಭರಣವಿದ್ದ ಚೀಲವನ್ನು ಎತ್ತಿ ಎಸೆದುಬಿಟ್ಟ. ಆ ಚೀಲದಲ್ಲಿ ವಧುವಿಗೆ ಸೇರಿದ ಒಂದಷ್ಟು ಹಣವೂ ಇತ್ತು. ಅದು ಅಲ್ಲೇ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಯಿತು.
ತನ್ನ ಹೊಚ್ಚ ಹೊಸ ನೆಕ್ಲೇಸ್ ಮತ್ತು ಚೈನು ಹಾಗೂ ಹಣವು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಣ್ಣಾರೆ ಕಂಡ ವಧು, ಆಘಾತಕ್ಕೀಡಾಗಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಆ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು, ಆಭರಣವಿದ್ದ ಚೀಲದ ಪತ್ತೆಗೆ ತೊಡಗಿದರು. ಕೆಲವು ಗಂಟೆಗಳಲ್ಲಿ ಅದು ಮರಳಿ ದೊರೆಯಿತು. ಆದರೆ ಅದರಲ್ಲಿ ನಗದು ಹಣ ಮಾತ್ರವೇ ಇತ್ತು. ಅದರಲ್ಲಿದ್ದ ನೆಕ್ಲೇಸ್ ಮತ್ತು ಚೈನು ಮಾಯವಾಗಿತ್ತು.
ಇದೀಗ ಈ ವರ ಮಹಾಶಯನೇ ಆ ಚಿನ್ನದೊಂದಿಗೆ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ಆತನಿಗಾಗಿ ಶೋಧಿಸತೊಡಗಿದ್ದಾರೆ. |