ಸೋನಿಯಾಗಾಂಧಿ ಸಾರ್ವಜನಿಕ ಸಮಾವೇಶ ನಡೆಸದಂತೆ ಉತ್ತರ ಪ್ರದೇಶ ಸರಕಾರ ತಡೆಯೊಡ್ಡಿರುವ ಬೆನ್ನಿಗೆ ಇದೀಗ ಮಧ್ಯಪ್ರವೇಶವೂ ಭೋಪಾಲ್‌ನಲ್ಲಿ ರ‌್ಯಾಲಿ ನಡೆಸಲು ಅನುಮತಿ ನಿರಾಕರಿಸಿದೆ.
ಇಲ್ಲಿನ ಲಾಲ್ ಪೆರೇಡ್ ಮೈದಾನದಲ್ಲಿ ಅಕ್ಟೋಬರ್ 19ರಂದು ಸಮಾವೇಶ ನಿಗದಿಯಾಗಿತ್ತು.
ಸಮಾವೇಶ ನಡೆಸಲುದ್ದೇಶಿಸಿರುವ ಲಾಲ್ ಪೆರೇಡ್ ಮೈದಾನವು ಪೊಲೀಸರಿಗೆ ಸೇರಿದ್ದಾಗಿದೆ. ಹುತಾತ್ಮರ ದಿನಾಚರಣೆಗಾಗಿ ಅಲ್ಲಿ ತಾಲೀಮು ನಡೆಯುತ್ತಿರುವ ಕಾರಣ ಮೈದಾನವನ್ನು ರ‌್ಯಾಲಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸೋನಿಯಾ ಗಾಂಧಿಯೊಂದಿಗೆ ರಾಜಕೀಯ ಗುದ್ದಾಟಕ್ಕಿಳಿದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಸೋಮವಾರ ನಿಷೇಧಾಜ್ಞೆ ಹೊರಡಿಸುವ ಮೂಲಕ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ಮಂಗಳವಾರ ಸಾರ್ವಜನಿಕ ಸಮಾವೇಶ ನಡೆಸದಂತೆ ತಡೆಯೊಡ್ಡಿದ್ದರು.
ಸೋನಿಯಾ ಗಾಂಧಿ ಮಂಗಳವಾರ ತನ್ನ ಸಂಸತ್ ಕ್ಷೇತ್ರ ರಾಯ್‌ಬರೇಲಿಯಲ್ಲಿ ಸಾರ್ವಜನಿಕ ರ‌್ಯಾಲಿ ನಡೆಸಲು ಯೋಜಿಸಿದ್ದರು. |