ಅಗರ್ತಲ: ಅಗರ್ತಲ ಸರಣಿ ಸ್ಫೋಟಗಳ ಇಬ್ಬರು ರೂವಾರಿಗಳನ್ನು ತ್ರಿಪುರಾ ಪೊಲೀಸರು ಕಳೆದರಾತ್ರಿ ಬಂಧಿಸಿದ್ದಾರೆ.
ವಿಕಾಸ್ ದೆಬ್ಬಾರ್ಮ(25) ಎಂಬಾತನನ್ನು ಖೊವಾಯ್ ಎಂಬಲ್ಲಿಂದ ಬಂಧಿಸಲಾಗಿದೆ. ಈತನಿಗೆ ಸ್ಫೋಟಕಗಳ ಪೂರೈಕೆ ಮಾಡಿರುವ ದಿನೇಶ್ ದೆಬ್ಬಾರ್ಮ(ಶರಣಾಗಿರುವ ಎಟಿಟಿಎಫ್ ಉಗ್ರ) ಎಂಬಾತನನ್ನೂ ವಿಕಾಸ್‌ನೊಂದಿಗೆ ಬಂಧಿಸಲಾಗಿದೆ.
ಈ ಹಿಂದೆ ಬಂಧನಕ್ಕೀಡಾಗಿರುವ ಶಾಂತಿ ದೆಬ್ಬಾರ್ಮ ಮತ್ತು ಅಂಗದ್ ಶಾಂತಲ್ ಎಂಬವರ ತಪ್ಪೊಪ್ಪಿಗೆ ಹೇಳಿಕೆಯಾಧಾರದಲ್ಲಿ ದಾಳಿ ನಡೆಸಿರುವ ಪೊಲೀಸರು ಸ್ಫೋಟಕ್ಕೆ ರಿಮೋಟ್ ಆಗಿ ಬಳಸಿರುವ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ವಾರ ಪೊಲೀಸರು ಬಾಂಬ್ ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಡಿಯಾಗ್ರಾಮ್‌ನ ಮನೆಯ ಹಿಂಬದಿಯ ಕೊಳದಲ್ಲಿ ಈ ಮೊಬೈಲ್ ಸೆಟ್ ಅನ್ನು ಎಸೆಯಲಾಗಿತ್ತು.
ಏತನ್ಮಧ್ಯೆ, ಉಲ್ಪಾ ಉಗ್ರರು, ಉಗ್ರರ ಪಂಗಡವೊಂದಕ್ಕೆ ತರಬೇತಿ ನೀಡುತ್ತಿದ್ದು, ಅವರಿಗೆ ಬಾಂಬ್ ತಯಾರಿ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ಬಂಧಿತರು ತಿಳಿಸಿದ್ದಾರೆ. |