ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡುವಿನ ಕದನ ಈಗ ಇನ್ನೊಂದು ಸುತ್ತು ತಲುಪಿದೆ. ಕಾಂಗ್ರೆಸ್ ಪಕ್ಷವು ತನ್ನನ್ನು ಅವಮಾನಿಸುತ್ತಿದೆ ಮತ್ತು ತನ್ನ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ತಡೆಯುಂಟು ಮಾಡುತ್ತಿದೆ ಎಂದು ಮಾಯಾವತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ. ಇದು ಉತ್ತರ ಪ್ರದೇಶ ಸರಕಾರವು ರಾಜ್ಯದ ಅಭಿವೃದ್ಧಿಗೆ ಆಸಕ್ತವಾಗಿಲ್ಲ ಎಂಬ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ದೂರಿಗೆ ಮಯಾವತಿ ನೀಡಿದ ಉತ್ತರ.ಮಾಯಾವತಿ ತನ್ನ ರಾಯ್‌ಬರೇಲಿ ಸಮಾವೇಶಕ್ಕೆ ಅಡ್ಡಿಯುಂಟುಮಾಡಿದ್ದಾರೆ ಎಂದು ದೂರುತ್ತಾ, ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅವಶ್ಯಕತೆ ಬಿದ್ದಲ್ಲಿ ತಾನು ಜೈಲಿಗೆ ಹೋಗಲೂ ಸಿದ್ಧ ಎಂದು ಸೋನಿಯಾ, ಮಂಗಳವಾರ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮಾಯಾ, ಸೋನಿಯಾ 'ನಾಟಕ'ವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನೋಯ್ಡಾದಿಂದ ಬಲ್ಲಿಯಾ ತನಕದ ಗಂಗಾ ಎಕ್ಸ್‌ಪ್ರೆಸ್ ವೇಯಂತಹ ನಮ್ಮ ಅಭಿವೃದ್ಧಿ ಯೋಜನೆಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಮಾಯಾವತಿ ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋನಿಯಾ ಆಪಾದನೆಗಳಿಗೆ ಉತ್ತರಿಸಿದ್ದಾರೆ.ಉತ್ತರ ಪ್ರದೇಶ ಸರಕಾರವು ತನ್ನ ರಾಯ್‌ಬರೇಲಿ ಸಮಾವೇಶಕ್ಕೆ ಅಡ್ಡಿಯಾಗಲು ಪ್ರಯತ್ನಿಸಿದೆ ಮತ್ತು ರೈಲ್ ಕೋಚ್ ಪ್ಯಾಕ್ಟರಿಗೆ ಮಂಜೂರಾಗಿರುವ ಜಾಗವನ್ನು ಹಿಂಪಡೆದಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿಲ್ಲ ಎಂದು ಸೋನಿಯಾ ಹೇಳಿದ್ದರು. ಅಲ್ಲದೆ ಕಾಂಗ್ರೆಸ್‌ನ ಜೈಲ್ ಭರೋ ಕಾರ್ಯವನ್ನು ನೀವು ಬೆಂಬಲಿಸುವಿರೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಗತ್ಯವಿದ್ದಲ್ಲಿ ಜೈಲಿಗೆ ಹೋಗಲು ತಾನೂ ಸಿದ್ಧ ಎಂಬುದಾಗಿ ಸೋನಿಯಾ ಪ್ರತಿಕ್ರಿಯಿಸಿದ್ದರು.ಸೋನಿಯಾ ರಾಯ್‌ಬರೇಲಿಯಲ್ಲಿ ನಾಟಕವಾಡಿ ದೆಹಲಿಗೆ ಮರಳಿದ್ದಾರೆ. ನಾವು ಅವರ ರ‌್ಯಾಲಿಯನ್ನು ತಡೆಯಲಿಲ್ಲ ಎಂದು ಮಾಯಾ ಪ್ರತ್ಯುತ್ತರ ನೀಡಿದ್ದಾರೆ." ಯುಪಿಎ ಸರಕಾರ ತಮಗೆ ಯಾವುದೇ ಹಣಕಾಸು ಸಹಾಯ ನೀಡಿಲ್ಲ. ರೈಲ್ ಕೋಚ್ ಫ್ಯಾಕ್ಟರಿ ಪ್ರಕರಣವನ್ನು ರಾಯ್‌ಬರೇಲಿಯಲ್ಲಿ ಎತ್ತಿರುವುದೇ ಉತ್ತರಪ್ರದೇಶ ಸರಕಾರವನ್ನು ಅವಮಾನಿಸಲು" ಎಂದು ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.ರಾಯ್ ಬರೇಲಿಯು ಗಾಂಧಿ ಕುಟುಂಬಕ್ಕೆ ಸೇರಿದ್ದು ಎಂಬ ಸೋನಿಯಾ ಹೇಳಿಕೆಗೆ, 'ಕಾಂಗ್ರೆಸ್‌ಗೆ ರಾಯ್‌ಬರೇಲಿ ಮಾತ್ರ ಇಡಿಯ ಉತ್ತರಪ್ರದೇಶ" ಎಂದು ಮಾಯಾ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ರಾಯ್‌ಬರೇಲಿ ಬಗ್ಗೆ ಮಾತ್ರ ಚಿಂತಿಸುತ್ತಿದೆ, ಆದರೆ ತನ್ನ ಸರಕಾರ ಇಡಿಯ ಉತ್ತರ ಪ್ರದೇಶದ ಬಗ್ಗೆ ಚಿಂತಿಸುತ್ತಿದೆ ಎಂದು ಅವರು ನುಡಿದರು.ಆಸೆ ನೆರವೇರಿಸಬಹುದಿತ್ತು ಒಂದೊಮ್ಮೆ ನಾವು ನಮ್ಮ ಅಧಿಕಾರವನ್ನು ದುರ್ಬಳಕೆ ಮಾಡಲು ಇಚ್ಛಿಸುತ್ತಿದ್ದರೆ, ನಾವು ಸೋನಿಯಾ ಗಾಂಧಿಯವರ ಜೈಲಿಗೆ ಹೋಗುವ ಬಯಕೆಯನ್ನು ಅತ್ಯಂತ ಸುಲಭವಾಗಿ ಈಡೇರಿಸಬಹುದಿತ್ತು ಎಂದು ಮಾಯಾ ಪತ್ರಿಕಾಗೋಷ್ಠಿಯಲ್ಲಿ ನುಡಿದರು.ರೈಲ್ ಕೋಚ್ ಫ್ಯಾಕ್ಟರಿ ಯೋಜನೆಯಿಂದಾಗಿ ಜಮೀನು ಕಳಕೊಳ್ಳುವ ರೈತರ ದೂರುಗಳನ್ನು ಪರಿಶೀಲಿಸಲು ಪ್ರಧಾನ ಕಾರ್ಯದರ್ಶಿಯವರು ತನಿಖೆ ನಡೆಸಲಿದ್ದು, ಮೂರು ದಿನಗಳೊಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ಬಳಿಕ ಉತ್ತರ ಪ್ರದೇಶ ಸಂಪುಟವು ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಮಾಯಾವತಿ ತಿಳಿಸಿದರು. |
|