ಬಧವಾರ ಅಂತ್ಯಗೊಂಡ ಎಲ್.ಕೆ.ಆಡ್ವಾಣಿಯವರ ಕ್ಯಾಲಿಕಟ್ ಭೇಟಿಯ ವೇಳೆಗೆ, ಅವರ ಕಾರ್‌ಕೇಡ್ ಚಾಲಕರಾಗಿದ್ದ ಕೇರಳ ಪೊಲೀಸ್ ಇಲಾಖೆಯ ಇಬ್ಬರು ಮುಸ್ಲಿಂ ಚಾಲಕರನ್ನು ತೆಗೆದು ಹಾಕಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಭದ್ರತಾ ಪಡೆಯ ಪ್ರಧಾನ ತಂಡವೊಂದು ಮಂಗಳವಾರವೇ ಕ್ಯಾಲಿಕಟ್‌ಗೆ ಆಗಮಿಸಿದ್ದು, ಝಡ್ ಪ್ಲಬ್ ಭದ್ರತೆ ಹೊಂದಿರುವ ಆಡ್ವಾಣಿಯವರಿಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲಿಸಿದ್ದು, ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಯಾವುದೇ ಕಾರಣ ನೀಡದೆ ತಮ್ಮನ್ನು ರೋಸ್ಟರ್ ಡ್ಯೂಟಿಯಿಂದ ತೆಗೆದು ಹಾಕಲಾಗಿದೆ ಎಂದು ಆ ಇಬ್ಬರು ಚಾಲಕರು ಹೇಳಿದ್ದಾರೆ.
ಈ ವಿಚಾರವನ್ನು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರೊಂದಿಗೆ ಪ್ರಸ್ತಾಪಿಸಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಇ.ಅಹ್ಮಮದ್ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್ಎಸ್‌ಜಿಯ ಪ್ರಧಾನ ನಿರ್ದೇಶಕ ಜೆ.ಕೆ. ದತ್ ಅವರಿಗೆ ತಿಳಿಸಿರುವುದಾಗಿ, ಗುಪ್ತಾ ಅವರು ಸಚಿವ ಅಹ್ಮದ್‌ರಿಗೆ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಕೇರಳ ಸರಕಾರವೂ, ಆಡ್ವಾಣಿ ಭೇಟಿಯ ವೇಳೆಗೆ ಮುಸ್ಲಿಂ ಚಾಲಕರನ್ನು ಕರ್ತವ್ಯದಿಂದ ತೆಗೆದು ಹಾಕಿರುವ ಕ್ರಮವನ್ನು ತನಿಖೆಗೊಳಪಡಿಸಲು ಆದೇಶ ನೀಡಿದೆ. ಇಂಡಿಯನ್ ಮುಸ್ಲಿಂ ಲೀಗ್ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ತನಿಖೆಗೆ ಆದೇಶ ನೀಡಿದ್ದಾರೆ. |