ಒಂದು ಲಕ್ಷ ರೂಪಾಯಿ ನಕಲಿ ನೋಟು ಒಯ್ಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ಮುಂಬಯಿಯ ರೈಲ್ವೇ ಪೊಲೀಸರು ಮಂಗಳವಾರ ಸಿಎಸ್‌ಟಿ ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇವರ ಹಿಂದೆ ಖೋಟಾ ನೋಟಿನ ದೊಡ್ಡ ಜಾಲವಿರುವ ಬಗ್ಗೆ ಪೊಲೀಸರು ಶಂಕಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.ಬಾಲಕರು ರೈಲ್ವೇ ನಿಲ್ದಾಣದ ಅಂಗಡಿಯೊಂದರಲ್ಲಿ ತಿಂಡಿ ತೆಗೆದುಕೊಂಡಿದ್ದರು. ಆಗ ಅವರ ವರ್ತನೆ ಬಗ್ಗೆ ಸಂಶಯಗೊಂಡ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದ. ರೈಲ್ವೇ ಪೊಲೀಸರು ಬಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಅವರಲ್ಲಿ ದೊಡ್ಡ ಮೊತ್ತದ ನಕಲಿ ನೋಟುಗಳಿರುವುದು ಪತ್ತೆಯಾಯಿತು. 500ರೂಪಾಯಿಯ 145 ನೋಟುಗಳು, 1000 ಮೌಲ್ಯದ 39 ನೋಟುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.ಅಪರಿಚಿತ ವ್ಯಕ್ತಿಯೊಬ್ಬ ನಕಲಿ ನೋಟುಗಳನ್ನು ಕೊಟ್ಟಿದ್ದು, ಈ ಹಣವನ್ನು ಮಾರುಕಟ್ಟೆಯಲ್ಲಿ ಚಲಾಯಿಸಿದಲ್ಲಿ ಕಮೀಷನ್ ಆಮಿಷ ನೀಡಲಾಗಿತ್ತು ಎಂದು ಬಾಲಕರು ಮಾಹಿತಿ ನೀಡಿದ್ದಾರೆ. ಇವರು ಉತ್ತರ ಭಾರತದಿಂದ ಬಂದವರಾಗಿದ್ದು, ಮುಂಬಯಿಯನ್ನು ಕಾರ್ಯಕ್ಷೇತ್ರವಾಗಿಸುವ ಗುರಿ ಹೊಂದಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ನೋಟು ಕೊಟ್ಟವನ ಬಗ್ಗೆ ಮಾಹಿತಿ, ಇವರ ಸಂಪರ್ಕಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಿಲೀಪ್ ಮಾನೆ ತಿಳಿಸಿದ್ದಾರೆ. |
|