ಮೈಗಳ್ಳ, ಭ್ರಷ್ಟ ಹಾಗೂ ಅಶಕ್ತ ನ್ಯಾಯಾಧೀಶರನ್ನು ಮನೆಗೆ ಕಳುಹಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಿಗೆ ಸಂದೇಶ ನೀಡಿದ್ದಾರೆ.
ನೀತಿಬಾಹಿರ ನ್ಯಾಯಾಧೀಶರ ಪ್ರವೇಶವನ್ನು ತಡೆಯಲು, ಆಯ್ಕಾ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸಿರುವ ಬಳಿಕ, ಬಾಲಕೃಷ್ಣನ್ ಅವರು 'ಲೆಕ್ಕಭರ್ತಿ'ಗೆ ಇರುವಂತಹ ನ್ಯಾಯಾಧೀಶರನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಿ ಎಂದಿದ್ದಾರೆ.
"ಅಶಕ್ತ, ಮೈಗಳ್ಳ ಮತ್ತು ಸಂಶಯಾಸ್ಪದ ಪ್ರತಿಷ್ಠೆ ಮತ್ತು ಅಪ್ರಯೋಜಕ" ನ್ಯಾಯಾಧೀಶರುಗಳಿಗೆ ಗುಡ್ ಬೈ ಹೇಳುವಂತೆ ಅವರು ಅಕ್ಟೋಬರ್ 14ರಂದು ಬರೆದ ಪತ್ರದಲ್ಲಿ ಹೇಳಿದ್ದಾರೆ. ಇಂತಹವರು 30 ವರ್ಷಗಳಿಗೂ ಅಧಿಕ ಸೇವೆಸಲ್ಲಿಸಿದ್ದರೂ ಕೂಡ ನಿರ್ದಾಕ್ಷಿಣ್ಯವಾಗಿ ಕಡ್ಡಾಯ ನಿವೃತ್ತಿ ನೀಡುವಂತೆ ಆದೇಶಿಸಿದ್ದಾರೆ.
ದುರ್ವವರ್ತನೆಯವರಿಗೆ ಔದಾರ್ಯ ನೀಡಲು ಸೇವಾ ವರ್ಷಗಳನ್ನು ಪರಿಗಣಿಸುವಂತಿಲ್ಲ ಎಂದು ಹೇಳಿರುವ ಸಿಜೆಐ, ಕೆಳನ್ಯಾಯಾಲಯಗಳ ನ್ಯಾಯಾಧೀಶರ ಕಾರ್ಯಕ್ಷಮತೆಯನ್ನು ಅವರು 50 ವರ್ಷಗಳನ್ನು ಪೂರೈಸಿದ ಬಳಿಕ ಮೌಲ್ಯಮಾಪನ ಮಾಡುವಂತೆ ಹೇಳಿದ್ದಾರೆ.
ಐವತ್ತು ವರ್ಷಗಳನ್ನು ಪೂರೈಸಿದ ನ್ಯಾಯಾಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡು ಬಂದಲ್ಲಿ ಅವರಿಗೆ ಅವಧಿ ಪೂರ್ವ ನಿವೃತ್ತಿ ನೀಡುವಂತೆ ತಾಕೀತು ಮಾಡಿದ್ದಾರೆ. ಮತ್ತು ಇಂತಹವರ ಮೇಲೆ ಯಾವುದೇ ಅನುಕಂಪವನ್ನು ತೋರಲಾಗುವುದಿಲ್ಲ ಎಂದೂ ಅವರು ಹೈಕೋರ್ಟ್‌ಗಳಿಗೆ ಹೇಳಿದ್ದಾರೆ.
ಸೂಕ್ತ ರೀತಿಯಲ್ಲಿ ಈ ಕ್ರಮವನ್ನು ಜಾರಿಗೆ ತಂದುದೇ ಆದರೆ, ಭ್ರಷ್ಟ, ಅಶಕ್ತ ಮತ್ತು ಸಂಶಯಾಸ್ಪದ ನಡತೆಯ ನ್ಯಾಯಾಧೀಶರಿಂದ ಮುಕ್ತವಾಗುವುದರೊಂದಿಗೆ ನ್ಯಾಯಾಧೀಶರ ದುರ್ವರ್ತನೆಗಳಿಗೆ ತಡೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. |