ತನ್ನ ಮಹತ್ವಾಕಾಂಕ್ಷೆಯ ಟಾಟಾ ನ್ಯಾನೋ ಯೋಜನೆಯನ್ನು ಪಶ್ಚಿಮ ಬಂಗಾಳದ ಸಿಂಗೂರಿನಿಂದ ಹಿಂತೆಗೆದುಕೊಂಡಿರುವ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಅವರು, ಪಶ್ಚಿಮ ಬಂಗಾಳ ಸರಕಾರವನ್ನು ಬೆಂಬಲಿಸುವಂತೆ ಅಲ್ಲಿನ ಜನತೆಗೆ ಕರೆ ನೀಡಿದ್ದಾರೆ. ರಾಜ್ಯವು ಅಭ್ಯುದಯವನ್ನು ಕಾಣಬೇಕಿದ್ದರೆ, ಪ್ರಸ್ತುತ ಸರಕಾರವನ್ನು ಬೆಂಬಲಿಸಿ, ಇಲ್ಲವಾದರೆ ವಿನಾಶಕಾರಿ ರಾಜಕೀಯ ವಾತಾವರಣವನ್ನು ಕಾಣಬೇಕಾದೀತು ಎಂದು ಅವರು ಹೇಳಿದ್ದಾರೆ.
ಇಲ್ಲಿನ ಆಯ್ದ ದೈನಿಕಗಳಲ್ಲಿ ಪ್ರಕಟವಾಗಿರುವ ಬಹಿರಂಗ ಪತ್ರದಲ್ಲಿ, ಔದ್ಯಮಿಕ ಮತ್ತು ಹೈಟೆಕ್ ಸೆಕ್ಟರ್‌ಗಳಲ್ಲಿ ತಮಗೆ ಶಿಕ್ಷಣ ಮತ್ತು ಉದ್ಯೋಗಗಳು ಬೇಕೇ ಅಥವಾ ಈಗ ಇರುವಂತೆ ಮುಂದುವರಿಯಬೇಕೆ ಎಂಬುದನ್ನು ಪಶ್ಚಿಮ ಬಂಗಾಳದ ಜನತೆ ಆಯ್ದುಕೊಳ್ಳಬೇಕು ಎಂದು ರತನ್ ಟಾಟಾ ಹೇಳಿದ್ದಾರೆ.
ಮುಂದಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಏನಾಗಬೇಕೆಂದು ತಾವು ನೋಡಲು ಬಯಸುತ್ತೇವೆ ಎಂಬ ತಮ್ಮ ಅಭಿಪ್ರಾಯವನ್ನು ಮತ್ತು ಆಶೋತ್ತರಗಳನ್ನು ಪಶ್ಚಿಮ ಬಂಗಾಳದ ಜನತೆ, ಅದರಲ್ಲೂ ವಿಶೇಷವಾಗಿ ಯುವಜನತೆ ವ್ಯಕ್ತ ಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ನ್ಯಾಯ ಪರಿಪಾಲನೆ, ಆಧುನಿಕ ಮೂಲ ಸೌಕರ್ಯ, ಔದ್ಯಮಿಕ ಅಭಿವೃದ್ಧಿಯೊಂದಿಗೆ ಅಭ್ಯುದಯದ ನಾಡನ್ನು ಕಟ್ಟಲು ಅವರು ಪ್ರಸಕ್ತ ಬುದ್ದದೇವ್ ಸರಕಾರವನ್ನು ಬೆಂಬಲಿಸಲು ಬಯಸುತ್ತಾರೋ ಇಲ್ಲ, ವೈರುಧ್ಯಗಳು, ಚಳುವಳಿ, ಹಿಂಸಾಚಾರ, ಕಾನೂನು ಬಾಹಿರತೆಯಿಂದ ಕೂಡಿದ ವಿನಾಶಕಾರಿ ರಾಜಕೀಯ ವಾತಾವರಣವನ್ನು ಕಾಣಲು ಅವರು ಬಯಸುತ್ತಾರೆಯೋ ಎಂದು ಟಾಟಾ ತನ್ನ ಬಹಿರಂಗ ಪತ್ರದಲ್ಲಿ ಕೇಳಿದ್ದಾರೆ. |