ಶ್ರೀಲಂಕಾ ತಮಿಳರ ಕುರಿತು ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರಿಗೆ ನೈಜ ಕಾಳಜಿ ಇದ್ದರೆ, ಅವರು ತಮ್ಮ ಶಾಸಕರಿಗೆ ರಾಜೀನಾಮೆ ನೀಡಲು ಸೂಚಿಸಲಿ ಎಂದು ಹೇಳಿರುವ ಎಐಎಡಿಎಂಕೆ ವರಿಷ್ಠೆ ಜಯಲಲಿತಾ, ಕರುಣಾನಿಧಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಲಿ ಎಂದು ಸವಾಲು ಹಾಕಿದ್ದಾರೆ." ಕರುಣಾನಿಧಿ ನಿಜವಾಗಿಯೂ ಶ್ರೀಲಂಕಾ ತಮಿಳರ ಬಗ್ಗೆ ಕಾಳಜಿ ಹೊಂದಿದ್ದರೆ, ಅವರು ತನ್ನ ಶಾಸಕರಿಗೆ ರಾಜೀನಾಮೆ ನೀಡುವಂತೆ ತಿಳಿಸಲಿ. ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ? ಅವರಿಗೆ ರಾಜ್ಯ ಸರಕಾರವನ್ನು ವಿಸರ್ಜಿಸುವ ದಮ್ಮು ಇದೆಯೇ" ಎಂದು ಅವರು ಪ್ರಶ್ನಿಸಿದ್ದಾರೆ.ಶ್ರೀಲಂಕಾದಲ್ಲಿ ತಮಿಳರ ಸಹಾಯಕ್ಕಾಗಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ತಮಿಳ್ನಾಡಿನ ಎಲ್ಲಾ ದ್ರಾವಿಡ ಪಕ್ಷಗಳು ಒತ್ತಾಯಿಸಿತ್ತಿವೆ. ಕಾಂಗ್ರೆಸ್ ಸಹ ಇದನ್ನು ಬೆಂಬಲಿಸಿದೆ. ಈ ಕುರಿತು ಇತ್ತೀಚೆಗೆ ನಡೆಸಲಾದ ಸರ್ವಪಕ್ಷಗಳ ಸಭೆಯಲ್ಲಿ ಶ್ರೀಲಂಕಾ ತಮಿಳರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ಎಲ್ಲಾ ಸಂಸತ್ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಲಾಗಿತ್ತು. ಅದರ ಮರುದಿನದಂದೆ ಕರುಣಾನಿಧಿ ಪುತ್ರಿ, ರಾಜ್ಯಸಭಾ ಸದಸ್ಯೆ ಕನಿಮೋಳ್ ಪ್ರಥಮವಾಗಿ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಏಳು ಕೇಂದ್ರ ಸಚಿವರು ಸೇರಿದಂತೆ ಡಿಎಂಕೆಯ ಎಲ್ಲಾ 14 ಸದಸ್ಯರು ತಮ್ಮ ರಾಜೀನಾಮೆ ಪತ್ರಗಳನ್ನು ಡಿಎಂಕೆ ವರಿಷ್ಠ ಕರುಣಾನಿಧಿಯವರಿಗೆ ಸಲ್ಲಿಸಿದ್ದಾರೆ. ಅಕ್ಟೋಬರ್ 29ರೊಳಗಾಗಿ ಕೇಂದ್ರವು ಕ್ರಮಕೈಗೊಳ್ಳಬೇಕೆಂದು ಸರ್ವಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ರಾಜೀನಾಮೆ ಪತ್ರಗಳು ಅಕ್ಟೋಬರ್ 29ರ ದಿನಾಂಕವನ್ನು ಹೊಂದಿದೆ.ಎಲ್‌ಟಿಟಿಇಗಳ ವಿರುದ್ಧ ಶ್ರೀಲಂಕಾ ಪಡೆಯು ದಾಳಿಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರಕಾರವು ಶ್ರೀಲಂಕಾವನ್ನು ಒತ್ತಾಯಿಸಬೇಕು ಎಂದು ಡಿಎಂಕೆ ಹಾಗೂ ಇತರ ಪಕ್ಷಗಳು ಒತ್ತಾಯಿಸಿವೆ." ನಾವು ಯುಪಿಎಯಿಂದ ಹಿಂತೆಗೆಯುವುದಿಲ್ಲ. ಆ ಉದ್ದೇಶದಿಂದ ನಾವು ಮಸೂದೆ ಪಾಸು ಮಾಡಲಿಲ್ಲ. ನಾವು ಎಲ್‌ಟಿಟಿಇಗಳನ್ನು ರಕ್ಷಿಸಲು ಅಥವಾ ಅವರನ್ನು ಉಳಿಸಲು ಪ್ರಯತ್ನಿಸುತ್ತಿಲ್ಲ. ಆದರೆ ಅನಾಥರಾಗಿರುವ ತಮಿಳರಿಗೆ ಸಹಾಯ ಮಾಡುವುದೇ ನಮ್ಮ ಗುರಿ" ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.ಕರುಣಾನಿಧಿ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಗೆ ಜಯಲಲಿತಾರ ಎಐಎಡಿಎಂಕೆ, ಬಿಜೆಪಿ ಹಾಗೂ ಇನ್ನು ಕೆಲವು ಪಕ್ಷಗಳು ಭಾಗವಹಿಸಿರಲಿಲ್ಲ. |
|