ವಿಚ್ಛೇದಿತ ಮುಸ್ಲಿಂ ಮಹಿಳೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರಡಿ ಜೀವನಾಂಶ ಕೇಳುವಂತಿಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ಶುಕ್ರವಾರ ಹೇಳಿದೆ. ಮುಸ್ಲಿಂ ಸಮುದಾಯದ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಯಲ್ಲಿರುವ ಕಾರಣ ಆಕೆ ಸೆಕ್ಷನ್ 125ರಡಿ ಪರಿಹಾರ ಕೇಳುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.ಇದೇ ನ್ಯಾಯಾಲಯದ ಇನ್ನೋರ್ವ ನ್ಯಾಯಾಧೀಶರು ಮಾರ್ಚ್ 31ರ 2008ರಂದು ಅಪರಾಧ ಪ್ರಕ್ರಿಯಾ ಸಂಹಿತೆಯಡಿ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂಬುದಾಗಿ ನೀಡಿರುವ ತೀರ್ಪನ್ನು ಸಮ್ಮತಿಸದ ನ್ಯಾಯಮೂರ್ತಿ ವಿ.ಕೆ.ವರ್ಮಾ, ಸೆಕ್ಷನ್ 125ರಡಿ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ಹೇಳಿದ್ದಾರೆ.ನ್ಯಾಯಮೂರ್ತಿ ಶರ್ಮಾ ಅವರು, ಗೋರಕ್‌ಪುರದ ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶಾಹಿದ್ ಜಮಾಲ್ ಅನ್ಸಾರಿ ಅವರು ಸಲ್ಲಿಸಿರುವ ಪುನರ್‌ಪರಿಶೀಲನಾ ಮನವಿಯ ವಿಚಾರಣೆ ನಡೆಸುತ್ತಿದ್ದ ವೇಳೆಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬ ನ್ಯಾಯಾಲಯವು ಫಿರ್ಯಾದುದಾರ ಅನ್ಸಾರಿಯವರು ತನ್ನ ವಿಚ್ಛೇದಿತ ಪತ್ನಿ ಅನೀಸ್ ಫಾತಿಮಾ ಅವರಿಗೆ ಮಾಸಿಕ 2000 ರೂಪಾಯಿ ಜೀವನಾಂಶ ನೀಡುವಂತೆ ತೀರ್ಪು ನೀಡಿತ್ತು. ಇದಲ್ಲದೆ ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚವನ್ನೂ ಭರಿಸುವಂತೆ ಹೇಳಿತ್ತು.ರಾಷ್ಟ್ರಾದ್ಯಂತ ಸಂಚಲನೆ ಮೂಡಿಸಿದ್ದ ಶಾಬಾನು ಪ್ರಕರಣದ ಬಳಿಕ 1986ರಲ್ಲಿ ಸಂಸತ್ತು ಮುಸ್ಲಿಂ ಮಹಿಳೆಯರಿಗಾಗಿ ವಿಚ್ಛೇದನದ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಮುಸ್ಲಿಂ ವಿಚ್ಛೇದಿತ ಮಹಿಳೆ ಇದರಡಿ ಮಾತ್ರ ಪರಿಹಾರ ಕೇಳಬಹುದೇ ಹೊರತು ಅಪರಾಧ ಸಂಹಿತೆಯಡಿ ಪರಿಹಾರ ಕೇಳುವಂತಿಲ್ಲ. ಅದಾಗ್ಯೂ, ಮುಸ್ಲಿಂ ಮಹಿಳೆಯು ತನ್ನ ಪತಿಯಿಂದ ಪರಿತ್ಯಕ್ತಳಾದಲ್ಲಿ ಮಾತ್ರ ಸೆಕ್ಷನ್ 125ರಡಿ ಜೀವನಾಂಶ ಕೇಳಬಹುದೇ ವಿನಹ ವಿಚ್ಛೇದನ ಪಡೆದರೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. |
|