ದೇಶದ ಮೊತ್ತ ಮೊದಲ ಮಾನವ-ರಹಿತ ಚಂದ್ರ ಯಾತ್ರೆ "ಚಂದ್ರಯಾನ-1"ರ ಕ್ಷಣ ಗಣನೆಯು ಸೋಮವಾರ ಆರಂಭವಾಗಲಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾವದಲ್ಲಿ ಕೌಂಟ್‌ಡೌನ್ ಆರಂಭವಾಗಲಿದೆ ಎಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸಹಾಯಕ ನಿರ್ದೇಶಕ ಎಂ.ವೈ.ಎಸ್.ಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಕ್ಟೋಬರ್ 22ರಂದು ಬಾಹ್ಯಾಕಾಶಕ್ಕೆ ನೆಗೆಯಲಿರುವ ಗಗನ ನೌಕೆಯನ್ನು ಶುಕ್ರವಾರ ಸಂಜೆಯೇ ಲಾಂಚ್ ಪ್ಯಾಡ್‌ಗೆ ತರಲಾಗಿದೆ ಎಂದವರು ಹೇಳಿದ್ದಾರೆ.
ಕೌಂಟ್‌ಡೌನ್ ಆರಂಭವಾಗಲು ವಿಭಿನ್ನ ಮಾನದಂಡಗಳ ಪರಿಶೀಲನೆ ಸೇರಿದಂತೆ ಪೂರ್ವಸಿದ್ಧತಾ ಚಟುವಟಿಕೆಗಳು ನಡೆಯುತ್ತಿವೆ ಎಂದಿರುವ ಪ್ರಸಾದ್, ಬುಧವಾರ ಬೆಳಿಗ್ಗೆ 6.20ಕ್ಕೆ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಹಾರಿಬಿಡಲಾಗುತ್ತದೆ ಎಂದು ಹೇಳಿದ್ದಾರೆ.
ಕೌಂಟ್‌ಡೌನ್ ಅವಧಿಯಲ್ಲಿ 42 ಟನ್ ಇಂಧನವನ್ನು ತುಂಬಲಾಗುತ್ತದೆ. ಉಡ್ಡಯನ ಸಂದರ್ಭದಲ್ಲಿ ಗಗನ ನೌಕೆಯು 1,380 ಕಿಲೋ ತೂಗುವ 11 ಪೇಲೋಡ್‌ಗಳನ್ನು (ವೈಜ್ಞಾನಿಕ ಉಪಕರಣಗಳನ್ನು) ಹೊತ್ತೊಯ್ಯಲಿದೆ.
ಚಂದ್ರನ ಅಧ್ಯಯನದ ಉದ್ದೇಶವಿರುವ ಈ ಚಂದ್ರಯಾನದ ವೆಚ್ಚ ಸುಮಾರು 386 ಕೋಟಿ ರೂ. ಸೂಕ್ತ ವಿದ್ಯುಚ್ಛಕ್ತಿ ಒದಗಿಸುವ ನಿಟ್ಟಿನಲ್ಲಿ ಈ ಗಗನ ನೌಕೆಯಲ್ಲಿ ಸೌರಶಕ್ತಿಯ ಪ್ಯಾನೆಲ್ ಇದೆ. ಗರಿಷ್ಠ 700 ವ್ಯಾಟ್ ವಿದ್ಯುತ್ತನ್ನು ಇದು ಒದಗಿಸುತ್ತದೆ. ಸೂರ್ಯನಿಂದ ಸಾಕಷ್ಟು ಬೆಳಕು ಲಭ್ಯವಾಗದಿದ್ದರೆ ಸಹಾಯವಾಗುವಂತೆ 36 ಆಂಪಿಯರ್-ಅವರ್ (Ah) ಲೀಥಿಯಮ್ ಅಯಾನ್ ಬ್ಯಾಟರಿಯನ್ನೂ ಇದರಲ್ಲಿ ಅಳವಡಿಸಲಾಗಿದೆ.
ಈ ನೌಕೆಯಲ್ಲಿರುವ ಅವಳಿ ಆಂಟೆನಾಗಳು 11 ಪೇ ಲೋಡ್‌ಗಳ ಮೂಲಕ ಸಂಗ್ರಹಿಸಿ ರೇಡಿಯೋ ತರಂಗಗಳ ಮೂಲಕ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡುತ್ತವೆ. ಬೆಂಗಳೂರಿನ ಸಮೀಪವಿರುವ ಬ್ಯಾಲಾಳು ಎಂಬ ತಾಣದಲ್ಲಿ 18 ಹಾಗೂ 32 ಮೀಟರ್ ವ್ಯಾಸವಿರುವ ಎರಡು ಆಂಟೆನಾಗಳನ್ನು ಸ್ಥಾಪಿಸಲಾಗಿದ್ದು, ಅಂತರಿಕ್ಷದಿಂದ ಬರುವ ರೇಡಿಯೋ ತರಂಗಗಳನ್ನು ಸಂಸ್ಕರಿಸಲಾಗುತ್ತದೆ. ಎರಡು ವರ್ಷಗಳ ಕಾಲ ಇದರ ಅಧ್ಯಯನ ನಡೆಯಲಿದೆ. |