ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿನ ರೈಲ್ವೆ ಕೋಚ್ ಬೋಗಿ ಕಾರ್ಖಾನೆ ಸ್ಥಾಪನೆಗೆ ನಿಗದಿಪಡಿಸಿದ್ದ ಹೆಚ್ಚುವರಿ ಭೂಮಿಯನ್ನು ವಾಪಸ್ ನೀಡಲು ಶನಿವಾರ ಮುಖ್ಯಮಂತ್ರಿ ಮಾಯಾವತಿ ಸರ್ಕಾರ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಕರಣ ಯು ಟರ್ನ್ ಪಡೆಯುವುದರೊಂದಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ನಡುವಿನ ಕದನ ಸುಖಾಂತ್ಯ ಕಂಡಂತಾಗಿದೆ.
ರಾಯ್ ಬರೇಲಿಯಲ್ಲಿನ ರೈಲ್ವೆ ಬೋಗಿ ಕಾರ್ಖಾನೆ ಸ್ಥಾಪನೆಗಾಗಿ 189.25 ಹೆಕ್ಟೇರ್ ಭೂಮಿಯನ್ನು 90 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಯಾವತಿ ಸರ್ಕಾರ ಸಮ್ಮತಿ ನೀಡಿದೆ.
ಕೆಲವೇ ದಿನದ ಹಿಂದಷ್ಟೇ ರಾಯ್ ಬರೇಲಿಯಲ್ಲಿನ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಯ 189ಹೆಕ್ಟೇರ್ ಭೂಮಿ ಮಂಜೂರಾತಿ ಆದೇಶವನ್ನು ವಾಪಸ್ ಪಡೆಯುವ ಮೂಲಕ ಮುಖ್ಯಮಂತ್ರಿ ಮಾಯಾವತಿ ಮತ್ತು ಸೋನಿಯಾ ನಡುವೆ ತೀವ್ರ ವಾಗ್ದಾಳಿ ನಡೆಯುವ ಮೂಲಕ ರಾಜಕೀಯ ಘರ್ಷಣೆಗೆ ಕಾರಣವಾಗಿತ್ತು.
ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ 940ಎಕರೆ ಭೂಮಿಯನ್ನು ರೈಲ್ವೆ ಬೋಗಿ ಕಾರ್ಖಾನೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಕೇಂದ್ರಕ್ಕೆ ಮತ್ತೆ ಹೆಚ್ಚುವರಿಯಾಗಿ 189.50 ಎಕರೆ ಭೂಮಿ ಅವಶ್ಯಕತೆಯಾದರು ಏಕೆ ಎಂದು ಮಾಯಾ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಆದರೆ ರಾಯ್ ಬರೇಲಿಯಲ್ಲಿ ಸೋನಿಯಾ ನಿಗದಿಪಡಿಸಿದ್ದ ಭೂಮಿ ಪೂಜೆಗೆ ತಡೆಯೊಡ್ಡಿರುವ ಹಿಂದೆ ಯಾವುದೇ ರಾಜಕೀಯ ಗಿಮಿಕ್ ಇಲ್ಲ ಎಂದು ಸ್ಪಷ್ಟಪಡಿಸಿದರು.
ಭೂಮಿಯನ್ನು ವಾಪಸ್ ನೀಡುವ ಕುರಿತು ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಪತ್ರವನ್ನು ರವಾನಿಸಿರುವುದಾಗಿ ಮಾಯಾವತಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. |