ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಒಂದು ಭಾಗಶಃ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ 25 ಮಂದಿ ಗಾಯಗೊಂಡಿರುವ ದಾರುಣ ಘಟನೆ ಭಾನುವಾರ ಮುಂಜಾನೆ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ದೆಹಲಿಯ ಲಕ್ಷ್ಮೀನಗರ ಪ್ರದೇಶದ ಸಮೀಪದ ಶಕಾರ್‌ಪುರ ಎಂಬಲ್ಲಿ ಮುಂಜಾನೆ ಸುಮಾರು ಏಳು ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ದೆಹಲಿ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದು, ಕನಿಷ್ಠ 10 ಮಂದಿಯನ್ನು ರಕ್ಷಿಸಲಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೇತುವೆಯ ಅವಶೇಷಗಳಡಿಯಲ್ಲಿ ಹಲವಾರು ವಾಹನಗಳು ಸಿಲುಕಿರುವುದು ಕಂಡು ಬರುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಶಂಕಿಸಲಾಗಿದೆ. ಹಲವು ಪ್ರಯಾಣಿಕರನ್ನು ಹೊಂದಿದ್ದ ಒಂದು ಬ್ಲೂಲೈನ್ ಬಸ್ ಕುಸಿದ ಸೇತುವೆಯಡಿ ಸಿಲುಕಿದೆ.
ಘಟನಾಸ್ಥಳಕ್ಕೆ ಧಾವಿಸಿರುವ ದೆಹಲಿ ಸಾರಿಗೆ ಸಚಿವ ಎ.ಕೆ.ವಾಲಿಯ ಅವರು ಇದೊಂದು ಬಹುದೊಡ್ಡ ದುರಂತ ಎಂದು ಹೇಳಿದ್ದಾರೆ. ಸೇತುವೆಯ ಇನ್ನಷ್ಟು ಭಾಗ ಕುಸಿಯಬಹುದು ಎಂಹ ಭೀತಿ ಹಬ್ಬಿದ್ದು, ಜನತೆ ಭಯಭೀತರಾಗಿದ್ದಾರೆ. ಒಂದೊಮ್ಮೆ ಇದು ಸಂಭವಿಸಿದಲ್ಲಿ ಮತ್ತಷ್ಟು ಅನಾಹುತಗಳಾಗಲಿವೆ.
ಅಗ್ನಿಶಾಮಕ ಮಂದಿ ಮತ್ತು ಲೋಕ ಕತ್ತರಿಸುವ ಯಂತ್ರಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗಿದೆ.
ಡಿಎಂಆರ್‌ಸಿಯಿಂದ ತನಿಖೆಗೆ ಆದೇಶ ಭಾನುವಾರ ಮುಂಜಾನೆಯ ಈ ದುರಂತದ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್(ಡಿಎಂಆರ್‌ಸಿ) ಆದೇಶಿಸಿದೆ ಎಂದು ಕಾರ್ಪೋರೇಶನ್‌ನ ವಕ್ತಾರ ಅಂಜು ದಯಾಲ್ ಹೇಳಿದ್ದಾರೆ.
ಡಿಎಂಆರ್‌ಸಿಯ ಹಲವು ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದಾರೆ. |