ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದ್ದು, ರಾಜ್ಯದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ.ಪ್ರಥಮ ಹಂತದ ಚುನಾವಣೆಯು ನವೆಂಬರ್ 17ರಂದು ನಡೆಯಲಿದೆ. ನವೆಂಬರ್ 23ರಂದು ದ್ವಿತೀಯ, ನವೆಂಬರ್ 30ರಂದು ತೃತೀಯ ಹಂತದ ಚುನಾವಣೆಗೆಳು ನಡೆಯಲಿವೆ.ಡಿಸೆಂಬರ್ 7 ರಂದು ನಾಲ್ಕನೆ ಸುತ್ತಿನ ಮತ್ತು, ಡಿಸೆಂಬರ್ 13, 17 ಹಾಗೂ 24ರಂದು ಅನುಕ್ರಮವಾಗಿ ಐದು ಆರು ಮತ್ತು ಏಳನೆ ಸುತ್ತಿನ ಚುನಾವಣೆಗಳು ನಡೆಯಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಮ್ಮು ಕಾಶ್ಮೀರದ ಸಂವಿಧಾನದ ಪ್ರಕಾರ 87 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ ಏಳು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿರುವುದಾಗಿ ಅವರು ತಿಳಿಸಿದರು. ಮತಎಣಿಕೆಯು ಡಿಸೆಂಬರ್ 28ಕ್ಕೆ ನಿಗದಿಯಾಗಿದೆ.ಚುನಾವಣೆಗಾಗಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಭದ್ರತಾಪಡೆಗಳನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಕುರಿತು ಚುನಾವಣಾ ಆಯುಕ್ತರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಮುಖ್ಯಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಕಾಶ್ಮೀರದಲ್ಲಿನ ಪರಿಸ್ಥಿತಿಗಳು ಚುನಾವಣೆ ನಡೆಸಲು ಸೂಕ್ತವಾಗಿಲ್ಲ ಎಂದು ಅಭಿಪ್ರಾಯಿಸಿದ್ದರು. ಮತದಾರರು ಮತಚಲಾಯಿಸಲು ಮನೆಯಿಂದ ಹೊರತೆರಳಲಾರರು ಮತ್ತು ರಾಜ್ಯದ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ನಿರಾಕರಿಸುತ್ತಿದ್ದಾರೆ ಮತ್ತು ಪಕ್ಷಗಳು ಸಹಕರಿಸುತ್ತಿಲ್ಲ ಎಂಬುದು ಅವರ ವಾದವಾಗಿತ್ತು.ಆದರೆ ಉಳಿದ ಚುನಾವಣಾ ಆಯುಕ್ತರು ರಾಜ್ಯದಲ್ಲಿ ಚುನಾವಣೆ ನಡೆಸುವ ಒಲವು ಹೊಂದಿದ್ದರು.2002 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಪಿಡಿಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಬಾರಿ ರಾಜ್ಯದಲ್ಲಿ ಸುಮಾರು 14 ಸಾವಿರ ಮತಗಟ್ಟೆಗಳ ಮೂಲಕ ನಾಲ್ಕು ಹಂತಗಳ ಚುನಾವಣೆ ನಡೆದಿತ್ತು. ಆಗ ಒಟ್ಟಾರೆ ಶೇ.44ರಷ್ಟು ಮತದಾನವಾಗಿದ್ದರೆ ಕಾಶ್ಮೀರ ಕಣಿವೆಯಲ್ಲಿ ಕೇವಲ ಶೇ.29ರಷ್ಟು ಮತದಾನ ದಾಖಲಾಗಿದೆ.ಕಳೆದ ಬಾರಿಯ ಚುನಾವಣೆ ವೇಳೆ ಭಾರೀ ಹಿಂಸಾಚಾರ ನಡೆದಿದ್ದು, ಆಗಿನ ಕಾನೂನು ಸಚಿವ ಮುಸ್ತಕ್ ಅಹಮ್ಮದ್ ಲೋನ್ ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದರು. |
|