ಮುಂಬೈ ಹೊರವಲಯದ ಕೇಂದ್ರಗಳಲ್ಲಿ ನಡೆದಿರುವ ರೈಲ್ವೇ ಮಂಡಳಿ ಪರೀಕ್ಷಾ ಕೇಂದ್ರಗಳ ಮೇಲೆ ಎಂಎನ್ಎಸ್ ಕಾರ್ಯಕರ್ತರು ನಡೆಸಿರುವ ದಾಳಿಯನ್ನು ಖಂಡಿಸಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ರಾಜ್ ಠಾಕ್ರೆಯವರನ್ನು ಒಬ್ಬ ಮಾನಸಿಕ ಅಸ್ವಸ್ಥನೆಂದು ಜರೆದಿದ್ದು, ಅವರ ಎಂಎನ್ಎಸ್ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ." ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ದಾಳಿಯ ತನಿಖೆ ನಡೆಸಬೇಕು. ಈ ಕುಕೃತ್ಯ ನಡೆಸಿದವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬೇಕು ಮತ್ತು ಎಂಎನ್ಎಸ್ ಪಕ್ಷವನ್ನು ನಿಷೇಧಿಸಬೇಕು" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲೂ ಒತ್ತಾಯಿಸಿದ್ದಾರೆ.ಮುಂಬೈ ಹೊರವಲಯದ 13 ಕೇಂದ್ರಗಳಲ್ಲಿ ರೈಲ್ವೇ ಮಂಡಳಿ ಪರೀಕ್ಷೆ ನಡೆಯುತ್ತಿದ್ದ ವೇಳೆ, ಸ್ಥಳೀಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ ಎಂಎನ್ಎಸ್ ಕಾರ್ಯಕರ್ತರು ಉತ್ತರ ಭಾರತದ ಅಭ್ಯರ್ಥಿಗಳನ್ನು ಅಕ್ಷರಶ ಓಡಿಸಿದ್ದರು. ಸುಪ್ರೀಂ ಕೋರ್ಟ್ ಅಥವಾ ಇನ್ಯಾವುದೇ ನ್ಯಾಯಾಲಯಗಳ ನಿರ್ದೇಶನಗಳು ಎಂಎನ್ಎಸ್ ನಾಯಕನ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. "ಚುನಾವಣೆಗಳು ಸಮೀಪಿಸುತ್ತಿರುವ ವೇಳೆಗೆ ಇಂತಹ ಘಟನೆಗಳು ಸಾಮಾನ್ಯ" ಎಂದು ಲಾಲೂ ವ್ಯಂಗ್ಯವಾಡಿದ್ದಾರೆ.ಈ ವಿಷಯದ ಕುರಿತು ತಾನು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ ಸಚಿವರು, ಘಟನೆಯ ಕುರಿತು ಸೂಕ್ತ ತನಿಖೆ ಕೈಗೊಳ್ಳುವ ಭರವಸೆಯನ್ನು ಅವರು ನೀಡಿರುವುದಾಗಿ ತಿಳಿಸಿದರು. |
|