ಒಂಭತ್ತು ವರ್ಷಗಳ ಕಠಿಣ ಪರಿಶ್ರಮದ ಬಳಿಕ, ರಾಷ್ಟ್ರದ ಪ್ರಪ್ರಥಮ ಮಾನವ ರಹಿತ ಚಂದ್ರಯಾತ್ರೆ ಯಾಗಿರುವ 'ಚಂದ್ರಯಾನ-1'ರ ಕ್ಷಣಗಣನೆಯು ಸೋಮವಾರ ಮುಂಜಾನೆ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭಗೊಂಡಿದೆ. ಚಂದ್ರಯಾನದ ಉಡ್ಡಯನವು ಬುಧವಾರ ನಸುಕಿನಲ್ಲಿ ನಿಗದಿಯಾಗಿದೆ.ಚಂದ್ರಯಾನ-1 ಚಂದ್ರಗ್ರಹದಲ್ಲಿ ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಇದು ಚಂದ್ರನ ಮೇಲ್ಮೈ ಹಾಗೂ ಅಲ್ಲಿನ ಖನಿಜಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ. ಚಂದ್ರನ ಸುತ್ತ 100 ಕಿ.ಮೀ ಅಕ್ಷಾಂಶದಲ್ಲಿ ಈ ಉಪಗ್ರಹ ಸುತ್ತಲಿದೆ. ಚಂದ್ರನಲ್ಲಿ ನೀರು ಮತ್ತು ಖನಿಜ ನಿಕ್ಷೇಪಗಳ ಬಗ್ಗೆ ವಿಶೇಷವಾಗಿ ಈ ನೌಕೆ ಅಧ್ಯಯನ ನಡೆಸಿ ಮಾಹಿತಿ ನೀಡಲಿದೆ. ಆಂಧ್ರಪ್ರದೇಶದಲ್ಲಿ ಶ್ರೀಹರಿ ಕೋಟಾದಿಂದ ಈ ನೌಕೆಯನ್ನು ಹಾರಿಬಿಡಲಾಗುವುದು. ಹವಾಮಾನವು ಅನುಕೂಲಕರವಾಗಿದ್ದಲ್ಲಿ, ಬುಧವಾರ ಮುಂಜಾನೆ 6.20ಕ್ಕೆ ಈ ಐತಿಹಾಸಿಕ ಉಡ್ಡಯನ ನಡೆಯಲಿದೆ.ಚಂದ್ರಯಾನದ ಕಾರ್ಯಕ್ಷಮತೆ ಹಾಗೂ ಅದರ ಪರೀಕ್ಷೆಯು ಶೇ.99ರಷ್ಟು ಪೂರ್ಣಗೊಂಡಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಈ ಯಾನದ ಯಶಸ್ಸು ಭಾರತವನ್ನು ವಿಶ್ವದ ಐದು ಪ್ರಮುಖ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲಿದೆ." ಚಂದ್ರನ ಕಕ್ಷೆಗೆ ಉಪಗ್ರಹಗಳನ್ನು ಕಳುಹಿಸಿ ಚಂದ್ರಗ್ರಹದ ಮೇಲ್ಮೈಗುಣಲಕ್ಷಣಗಳು ಹಾಗೂ ಖನಿಜಗಳ ಮಾಹಿತಿ ಸಂಗ್ರಹಿಸುವುದು ಭಾರತೀಯ ವಿಜ್ಞಾನಿಗಳ ಕನಸಾಗಿದೆ" ಎಂದು ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ)ದ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ.ಕೌಂಟ್ಡೌನ್ ಅವಧಿಯಲ್ಲಿ 42 ಟನ್ ಇಂಧನವನ್ನು ತುಂಬಲಾಗುತ್ತದೆ. ಉಡ್ಡಯನ ಸಂದರ್ಭದಲ್ಲಿ ಗಗನ ನೌಕೆಯು 1,380 ಕಿಲೋ ತೂಗುವ 11 ಪೇಲೋಡ್‌ಗಳನ್ನು (ವೈಜ್ಞಾನಿಕ ಉಪಕರಣಗಳನ್ನು) ಹೊತ್ತೊಯ್ಯಲಿದೆ.ಚಂದ್ರನ ಅಧ್ಯಯನದ ಉದ್ದೇಶವಿರುವ ಈ ಚಂದ್ರಯಾನದ ವೆಚ್ಚ ಸುಮಾರು 386 ಕೋಟಿ ರೂ. ಸೂಕ್ತ ವಿದ್ಯುಚ್ಛಕ್ತಿ ಒದಗಿಸುವ ನಿಟ್ಟಿನಲ್ಲಿ ಈ ಗಗನ ನೌಕೆಯಲ್ಲಿ ಸೌರಶಕ್ತಿಯ ಪ್ಯಾನೆಲ್ ಇದೆ. ಗರಿಷ್ಠ 700 ವ್ಯಾಟ್ ವಿದ್ಯುತ್ತನ್ನು ಇದು ಒದಗಿಸುತ್ತದೆ. ಸೂರ್ಯನಿಂದ ಸಾಕಷ್ಟು ಬೆಳಕು ಲಭ್ಯವಾಗದಿದ್ದರೆ ಸಹಾಯವಾಗುವಂತೆ 36 ಆಂಪಿಯರ್-ಅವರ್ (Ah) ಲೀಥಿಯಮ್ ಅಯಾನ್ ಬ್ಯಾಟರಿಯನ್ನೂ ಇದರಲ್ಲಿ ಅಳವಡಿಸಲಾಗಿದೆ.ಈ ನೌಕೆಯಲ್ಲಿರುವ ಅವಳಿ ಆಂಟೆನಾಗಳು 11 ಪೇ ಲೋಡ್ಗಳ ಮೂಲಕ ಸಂಗ್ರಹಿಸಿ ರೇಡಿಯೋ ತರಂಗಗಳ ಮೂಲಕ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡುತ್ತವೆ. ಬೆಂಗಳೂರಿನ ಸಮೀಪವಿರುವ ಬ್ಯಾಲಾಳು ಎಂಬ ತಾಣದಲ್ಲಿ 18 ಹಾಗೂ 32 ಮೀಟರ್ ವ್ಯಾಸವಿರುವ ಎರಡು ಆಂಟೆನಾಗಳನ್ನು ಸ್ಥಾಪಿಸಲಾಗಿದ್ದು, ಅಂತರಿಕ್ಷದಿಂದ ಬರುವ ರೇಡಿಯೋ ತರಂಗಗಳನ್ನು ಸಂಸ್ಕರಿಸಲಾಗುತ್ತದೆ.
|
|