ಭಾರತ ಅಮೆರಿಕ ಅಣು ಒಪ್ಪಂದ ಹಾಗೂ ಇತರ ರಾಷ್ಟ್ರಗಳೊಂದಿಗಿನ ವ್ಯವಹಾರಗಳನ್ನು 'ಮೈಲಿಗಲ್ಲಿನ ಯುಶಸ್ಸು' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಯಲ್ಲಿಂದು ಬಣ್ಣಿಸಿದ್ದಾರೆ. ಈ ಒಪ್ಪಂದವು ರಾಷ್ಟ್ರೀಯ ಹಿತಾಸಕ್ತಿಗೆ ಸಂಪೂರ್ಣ ನಿಷ್ಠವಾಗಿದೆ ಮತ್ತು "ಭಾರತದ ನಿಷ್ಕಳಂಕ ಅಣ್ವಸ್ತ್ರ ಪ್ರಸರಣ ತಡೆಯ ಶಿಫಾರಸುಗಳ ಗುರುತಿಸುವಿಕೆ ಮತ್ತು ಸಮರ್ಥನೆ" ಎಂಬುದಾಗಿ ಮುಖರ್ಜಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಸ್ವಯಂ ಹೇಳಿಕೆ ನೀಡಿದ ಅವರು ಈ ಉಪಕ್ರಮವು ಯಾವುದೇ ರೀತಿಯಲ್ಲೂ ನಮ್ಮ ಸ್ವತಂತ್ರ ವಿದೇಶಾಂಗ ನೀತಿಯ ಮುಂದುವರಿಕೆಗೆ ಅಡ್ಡಿಯಾಗುವುದಿಲ್ಲ. ಅದು ನಮ್ಮ ವ್ಯೂಹಾತ್ಮಕ ಸ್ವಾಯತ್ತೆಯ ಮೇಲೂ ಯಾವುದೇ ರೀತಿಯ ಪರಿಣಾಮ ಬೀರದು, ಬದಲಿಗೆ, ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಕೊಡುಗೆ ನೀಡುವಂತಹ ವಿದೇಶಾಂಗ ನೀತಿಯನ್ನು ಮುಂದುವರಿಸಲು ಹೆಚ್ಚಿನ ಅವಕಾಶ ಒದಗಿಸಲಿದೆ. ಇದು ರಾಷ್ಟ್ರದ ಅಣುಶಕ್ತಿ ಅವಶ್ಯಕತೆಯನ್ನು ಒದಗಿಸುತ್ತದೆ ಮತ್ತು ಜಾಗತಿಕ ವಿದ್ಯಮಾನಗಳಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.
ಪಂಡಿತ್ ಜವಾಹಾರ್ ಲಾಲ್ ನೆಹರೂ ಹಾಗೂ ಹೋಮಿ ಬಾಬ ಅವರ ಚಿಂತನೆಯಂತೆ ಮೂರು ಹಂತಗಳ ದೇಶೀಯ ಅಣು ಕಾರ್ಯಕ್ರಮ ಮುಂದುವರಿಯಲಿದೆ ಎಂದು ಪ್ರಣಬ್ ಹೇಳಿದರು.
ಭಾರತ-ನಿರ್ದಿಷ್ಟ ಸುರಕ್ಷತಾ ಒಪ್ಪಂದ ಮತ್ತು ಅಮೆರಿಕ ಹಾಗೂ ಫ್ರಾನ್ಸ್ ಜತೆಗಿನ ರಾಷ್ಟ್ರದ ಅಣು ಸಹಕಾರವು ಭಾರತದ ರಕ್ಷಣಾ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರದು ಮತ್ತು ನಾಗರಿಕ ಅಣುಶಕ್ತಿ ಕುರಿತಂತೆ ಅಂತಾರಾಷ್ಟ್ರೀಯ ಸಹಕಾರದಲ್ಲಿ ಇದ್ದರೂ ನಾವು ನಮ್ಮ ರಕ್ಷಣಾ ಕಾರ್ಯದಂಗವಾಗಿ ಕ್ರಮಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇವೆ ಎಂದು ಅವರು ನುಡಿದರು.
ಜೈವಿಕ ಇಂಧನ ಹಾಗೂ ವಾಯು ಶಕ್ತಿ, ಜಲಶಕ್ತಿಯಂತಹ ಮರುಬಳಕೆಯ ಇಂಧನ ಮೂಲಗಳ ಅಭಿವೃದ್ಧಿಯನ್ನು ರಾಷ್ಟ್ರವು ಮುಂದುವರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. |