ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆಯ ಬಂಧನದ ಬಳಿಕ ಮುಂಬೈಯ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದೆ. ಥಾಣೆಯಂತಹ ಸ್ಥಳಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.
ದಕ್ಷಿಣ ಮುಂಬೈಯ ಟಾರ್ಡಿಯೋದಲ್ಲಿ ನಿಲ್ಲಿಸಲಾಗಿದ್ದ ಟಾಕ್ಸಿಗಳನ್ನು ದುಷ್ಕರ್ಮಿಗಳು ಹಾನಿಗೀಡುಮಾಡಿದ್ದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬೊರಿವಿಲಿಯಲ್ಲಿ ಟ್ರಕ್‌ಗಳಿಗೆ ಬೆಂಕಿಇಕ್ಕಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದರು. ವಿಲೆಪಾರ್ಲೆ ಮತ್ತು ಜೋಗೇಶ್ವರಿ ಪ್ರದೇಶಗಳಲ್ಲೂ ಹಿಂಸಾಚಾರ ವರದಿಯಾಗಿದೆ.
ದುಷ್ಕರ್ಮಿಗಳು ಮುಲುಂದ್ ವಾಯುವ್ಯ ಪ್ರದೇಶದಲ್ಲಿನ ಟೋಲ್ ಬೂತ್ ಒಂದರ ಮೇಲೆ ದಾಳಿ ನಡೆಸಿದ್ದು, ಬೆಂಕಿ ಇಕ್ಕಿದ್ದಾರೆ. ಇದಲ್ಲದೆ, ಕಾಂಗ್ರೆಸ್ ವಕ್ತಾರ ಸಂಜಯ್ ನಿರುಪಮ್ ಅವರ ನಿವಾಸದ ಮೇಲೂ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಮುಂಬೈ ಹೊರವಲಯದ ಶಾಲೆಗಳಿಗೆ ರಜೆ ಸಾರಲಾಗಿದೆ. ಯುವುದೇ ಅನಾಹುತಕಾರಿ ಕ್ರಮಗಳನ್ನು ಹತ್ತಿಕ್ಕಲು ಮುಂಬೈ ನಗರದಲ್ಲಿ ಭದ್ರತಾ ಕ್ರಮಗಳನ್ನು ಮೇಲ್ಮಟ್ಟಕ್ಕೇರಿಸಲಾಗಿದೆ.
"ರಾಜ್ ಠಾಕ್ರೆ ಬಂಧನಕ್ಕೆ ಯಾವುದೇ ಗಟ್ಟಿಯಾದ ಪುರಾವೆ ಇಲ್ಲ. ರಾಜ್ಯ ಸರಕಾರವು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ" ಎಂದು ಎಂಎನ್ಎಸ್ ವಕ್ತಾರ ಶಿರಿಶ್ ಪಾರ್ಕರ್ ಅವರು ರಾಜ್ ಬಂಧನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಹಾರಾಷ್ಟ್ರ ಸರಕಾರದ ಸೇಡಿನ ಕ್ರಮ ಮತ್ತು ರಾಜಕೀಯ ಫಿತೂರಿ ಎಂದು ಪಾರ್ಕರ್ ಬಣ್ಣಿಸಿದ್ದಾರೆ.
ಬಂಧನದ ಬಳಿಕದ ಗಲಭೆಯು ಸಾರ್ವಜನಿಕ ಕೋಪಾವೇಶ ಮತ್ತು ಬಂಧನದ ವಿಚಾರವನ್ನು ಎಂಎನ್ಎಸ್ ಮಹಾರಾಷ್ಟ್ರದ ಜನತೆಯ ಬಳಿಗೆ ಕೊಂಡೊಯ್ಯಲಿದೆ ಎಂದು ಪಾರ್ಕರ್ ಹೇಳಿದ್ದಾರೆ. |