ಕೋಸಿ ಪ್ರವಾಹ ಸಂತ್ರಸ್ತರ ಮುಖದಲ್ಲೀಗ ನಗು ಮಿಂಚು. ಅವರಿಗೂ ಸಂತೋಷಪಡಲು ಕಾರಣಗಳು ಸಿಗುತ್ತಿದೆ. ಎರಡು ತಿಂಗಳ ಹಿಂದೆ ಅನಿರೀಕ್ಷಿತವಾಗಿ ಕಾಣಿಸಿಕೊಂಡ ಕೋಸಿ ನದಿ ಪ್ರವಾಹದಿಂದ ನಿರ್ವಸಿತರಾದ ಬಿಹಾರ ಗ್ರಾಮವಾಸಿಗಳಿಗೆ ಮದುವೆ ಸಂಭ್ರಮದ ಕನಸು ಬಿತ್ತಿದೆ!
ಒಂದು ಪರಿಹಾರ ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ವರನ ದಿಬ್ಬಣ ಹೋಗುವುದೇ ವಿಶೇಷ. ಹಾಗಾಗಿ ಪ್ರವಾಹ ಸಂತ್ರಸ್ತ ಜನರಿಗೆ ಖುಷಿಯೋ ಖುಷಿ. ಬಿಹಾರದ ಸಹಾರ್ಸಾ ಗ್ರಾಮದಿಂದ ವರ ರಾಜೀವನ ದಿಬ್ಬಣ ಹೊರಟು ಮದುವೆ ಮಂಟಪ ತಲುಪಿತು. ವಧು ಅಲ್ಲಿ ಕಾಯುತ್ತಿದ್ದಳು.
"ಮೊದಲ ನೋಟದಲ್ಲೇ ಇಷ್ಟವಾದಳು. ಎಲ್ಲಾ ಸಂಪ್ರದಾಯಗಳ ಮೂಲಕವೇ ನಡೆಯುತ್ತದೆ. ಅವಳು ಸುಶಿಕ್ಷಿತೆ ಮತ್ತು ನನ್ನ ಆಯ್ಕೆ ಸರಿಯಾಗಿದೆ ಎಂದುಕೊಂಡಿದ್ದೇನೆ" ಎಂಬುದು ಮದುಮಗ ರಾಜೀವನ ಅಭಿಪ್ರಾಯ.
ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರ ಹಲವು ಕ್ಯಾಂಪ್‌ಗಳ ಸಾವಿರಾರು ಜನರು ಒಟ್ಟು ಸೇರುವ ಜಾಗವಾಗಿ ಮಾರ್ಪಟ್ಟಿತ್ತು. ತಿಂಡಿ-ತಿನಸುಗಳು, ನೃತ್ಯ ಇಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಇದೀಗ ಸಂತ್ರಸ್ತರಾಗಿರುವವರಲ್ಲಿ ಇದ್ದುದ್ದನ್ನೆಲ್ಲವ ಆಹುತಿ ತೆಗೆದುಕೊಂಡ ಪ್ರವಾಹದ ಪರಿಣಾಮ ಎರಡೂ ಕಡೆಯವರನ್ನು ತಟ್ಟಿರುವುದರಿಂದ ಅಲ್ಲಿರುವ ಎಲ್ಲರೂ ಸಮಾನ ದು:ಖಿಗಳೂ ಹೌದು.
"ಆಡಳಿತ ವ್ಯವಸ್ಥೆ ಈ ವಿವಾಹ ಸಮಾರಂಭವನ್ನು ಸರಾಗವಾಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ನಿಜಕ್ಕೂ ಎರಡು ಸಂತ್ರಸ್ತರ ಕ್ಯಾಂಪ್‌ಗಳ ಜನರಿಗೆ ಇದೊಂದು ಹಬ್ಬವಾಗಿದೆ" ಎನ್ನುತ್ತಾರೆ ಸಹರ್ಸಾ ಜಿಲ್ಲಾ ದಂಡಾಧಿಕಾರಿ ಲಕ್ಷ್ಮಣನ್.
ಎರಡು ತಿಂಗಳ ಹಿಂದೆ ಪೂರ್ವಸೂಚನೆಯಿಲ್ಲದೆ ಕೋಸಿ ಅಣೆಕಟ್ಟಿನಿಂದ ಪ್ರವಾಹೋಪಾದಿಯಾಗಿ ಹರಿಯುತ್ತಿರುವ ನೀರು ಬಿಹಾರದ ಹಲವು ಹಳ್ಳಿಗಳನ್ನು ಕೊಚ್ಚಿಕೊಂಡು ಹೋಗಿದ್ದು ಅಲ್ಲಿನ ಜನರನ್ನು ನಿರ್ವಸಿತರನ್ನಾಗಿಸಿದೆ. |