ಪರಮಾಣು ಸ್ಥಾವರಗಳು, ಬಂದರುಗಳು ಮತ್ತು ತೈಲ ಸಂಸ್ಕರಣಾ ಘಟಕಗಳೂ ಸೇರಿದಂತೆ ದೇಶದ ಪ್ರಮುಖ ಕೇಂದ್ರಗಳ ಮೇಲೆ ಭಯೋತ್ಪಾದಕರ ಗಮನ ಕೇಂದ್ರೀಕೃತವಾಗಿದೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಯಿತು.
ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಈ ಕುರಿತು ಪೂರ್ಣ ಮಾಹಿತಿ ನೀಡುವುದು ಸಾಧ್ಯವಿಲ್ಲ ಎಂದು ಗೃಹಸಚಿವಾಲಯ ನಿರಾಕರಿಸಿದೆ.
ಸಂಸದ ಕೆ.ಎಸ್.ರಾವ್ ಅವರ ಪ್ರಶ್ನೆಯೊಂದನ್ನು ಉತ್ತರಿಸುತ್ತಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಭಯೋತ್ಪಾದಕರ ಹದ್ದಿನ ಕಣ್ಣಿನಿಂದ ಪಾರಾಗುವ ನಿಟ್ಟಿನಲ್ಲಿ ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ವಿವರ ನೀಡಲೂ ನಿರಾಕರಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದನಾ ಜಾಲವು ಮುಂದುವರಿದಿದ್ದು, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ಉಗ್ರವಾದಿ ಸಂಘಟನೆಗಳು ಮತ್ತು ಗುಂಪುಗಳು ಪಾಕಿಸ್ತಾನದಲ್ಲಿ ಮೂಲವನ್ನು ಹೊಂದಿವೆ ಎಂದು ಹೇಳಿದರು.
ಭಾರತದಲ್ಲಿ ಹೆಚ್ಚು ಕಾಲ ನೆಲೆ ನಿಲ್ಲುವ ಪಾಕಿಸ್ತಾನೀಯರಿಗೆ ಭಾರತೀಯ ಪೌರತ್ವ ನೀಡಲು ಅಸಾಧ್ಯ. ಅವರು ಅಕ್ರಮ ವಲಸಿಗರು ಎಂಬ ವಿಭಾಗಕ್ಕೆ ಸೇರುತ್ತಾರೆ ಎಂದು ಹೇಳಿದ ಅವರು, ಪಾಕಿಸ್ತಾನದ ಅಲ್ಪ ಸಂಖ್ಯಾತ ಸಮುದಾಯ (ಹಿಂದೂಗಳು ಮತ್ತು ಸಿಕ್ಖರು) ಭಾರತದಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ವಾಸಿಸುತ್ತಿದ್ದರೆ, ಕೆಲವೊಂದು ಶರತ್ತುಗಳನ್ನು ಪೂರೈಸಿದಲ್ಲಿ ಅವರಿಗೆ ಭಾರತೀಯ ಪೌರತ್ವ ನೀಡಬಹುದಾಗಿದೆ ಎಂದೂ ಸ್ಪಷ್ಟಪಡಿಸಿದರು. |