ಮಹಾರಾಷ್ಟ್ರ ನವನಿರ್ಮಾಣ್ ಸೇನಾದ ವರಿಷ್ಠ ರಾಜ್ ಠಾಕ್ರೆಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಮುಂಬೈ ಹೊತ್ತಿ ಉರಿಯುತ್ತಿದ್ದು, ಎಂಎನ್ಎಸ್ ಕಾರ್ಯಕರ್ತರು ಬಸ್,ರಿಕ್ಷಾ,ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚುವ ಮೂಲಕ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಉತ್ತರ ಭಾರತೀಯರ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆಯನ್ನು ರತ್ನಗಿರಿಯಲ್ಲಿ ಬಂಧಿಸಿ,ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು.
ಬಳಿಕ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ರಾಜ್ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ 15ಸಾವಿರ ರೂ.ಗಳ ಭದ್ರತೆಯೊಂದಿಗೆ ಜಾಮೀನು ನೀಡಿತ್ತು.
ಜಾಮೀನು ದೊರೆತ ಕೂಡಲೇ ರಾಜ್ ಅವರನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ಅಲ್ಲಿ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ ಕಲ್ಯಾಣ್ ಠಾಣೆಯಲ್ಲಿ ಸೆರೆಮನೆವಾಸ ಅನುಭವಿಸುವಂತಾಗಿದೆ.
ಭುಗಿಲೆದ್ದ ಹಿಂಸಾಚಾರ: ರಾಜ್ ಠಾಕ್ರೆ ಬಂಧನವಾಗುತ್ತಿದ್ದಂತೆಯೇ ಕಲ್ಯಾಣ್,ಬಾಂದ್ರಾ,ಥಾಣೆ ಸೇರಿದಂತೆ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದೆ. ರಿಕ್ಷಾ. ಬಸ್, ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕಾಗಿ ಸಿಆರ್‌ಪಿಎಫ್, ಸ್ಟೇಟ್ ರಿಸರ್ವ್ ಪೊಲೀಸ್ ಸೇರಿದಂತೆ ಸುಮಾರು 20ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |