ಕುಡಿಯುವ ನೀರಿನ ಯೋಜನೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿಂ ಮಾಜಿ ಮುಖ್ಯಮಂತ್ರಿ ಬಹಾದ್ದೂರ್ ಭಂಡಾರಿ, ಐಎಎಸ್ ಅಧಿಕಾರಿ ಸೇರಿದಂತೆ ಒಂಬತ್ತು ಮಂದಿಗೆ ಗಂಗ್‌ಟೋಕ್ ಸಿಬಿಐ ಕೋರ್ಟ್ ಶನಿವಾರ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹಗರಣ ಕುರಿತಂತೆ ಭಂಡಾರಿ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಪಿ.ಕೆ.ಪ್ರಧಾನ್‌ಗೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ 10ಸಾವಿರ ರೂಪಾಯಿ ದಂಡ ವಿಧಿಸಿದೆ.
ಅಲ್ಲದೇ ಎಂಟು ಮಂದಿ ಖಾಸಗಿ ಗುತ್ತಿಗೆದಾರರಿಗೆ ಐದು ತಿಂಗಳ ಸೆರೆಮನೆವಾಸ ಮತ್ತು 5ಸಾವಿರ ರೂಪಾಯಿ ದಂಡ ವಿಧಿಸಿದೆ. 1984ರಲ್ಲಿ ಮಾಜಿ ಮುಖ್ಯಮಂತ್ರಿ ಸೇರಿದಂತೆ 15ಮಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 1994ರಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಇವರೆಲ್ಲರ ಮೇಲೆ ಸಿಬಿಐ ಕ್ರಿಮಿನಲ್ ಸಂಚು ಹಾಗೂ ಭ್ರಷ್ಟಾಚಾರ ಆರೋಪವನ್ನು ದಾಖಲಿಸಿತ್ತು, ಇದರಲ್ಲಿ ಇಬ್ಬರು ಖುಲಾಸೆಗೊಂಡಿದ್ದರೆ, ನಾಲ್ಕು ಮಂದಿ ಗುತ್ತಿಗೆದಾರರು ವಿಚಾರಣೆ ಸಂದರ್ಭದಲ್ಲಿ ಸಾವನ್ನಪ್ಪಿದ್ದರು.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಯೋಜನೆಯಡಿಯಲ್ಲಿ 1983ರಲ್ಲಿ ರಾಜ್ಯ ಸರ್ಕಾರ 36 ಗ್ರಾಮೀಣ ನೀರು ಸರಬರಾಜು ಯೋಜನೆಯನ್ನು ಮಂಜೂರು ಮಾಡಿತ್ತು. ಈ ಯೋಜನೆಯ ಒಟ್ಟು ಮೊತ್ತ 1.62ಕೋಟಿ ರೂಪಾಯಿ. ಈ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಒಪ್ಪಿಸುವ ಮೂಲಕ ಭ್ರಷ್ಟಾಚಾರ ಬಯಲುಗೊಂಡಿತ್ತು. |