ಶ್ರೀಲಂಕನ್ ತಮಿಳರ ವಿವಾದದ ಸಂಬಂಧ ಯುಪಿಎ ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದ ತಮಿಳುನಾಡಿನ ಡಿಎಂಕೆ ಸರಕಾರವು ಕೊಂಚ ತಣ್ಣಗಾಗಿದ್ದು, ಆಡಳಿತಾರೂಡ ಯುಪಿಎ ಸರಕಾರಕ್ಕೆ ಯಾವುದೇ ಸಮಸ್ಯೆಯನ್ನು ತನ್ನ ಪಕ್ಷವು ಉಂಟುಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದೆ.ತಮಿಳರ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶ್ರೀಲಂಕಾ ಸರಕಾರ ಭಾರತಕ್ಕೆಭರವಸೆ ನೀಡಿರುವದರ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವು ಯುಪಿಎ ಸರಕಾರಕ್ಕೆ ನೀಡಿದ್ದ ರಾಜೀನಾಮೆ ಬೆದರಿಕೆಯನ್ನು ಡಿಎಂಕೆ ಸರಕಾರವು ಹಿಂತೆಗೆದುಕೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ರವಿವಾರ ತಿಳಿಸಿದ್ದಾರೆ.ತಮಿಳರ ರಕ್ಷಣೆ ಮತ್ತು ಯುದ್ಧಪೀಡಿತ ಪ್ರದೇಶದಲ್ಲಿ ವೈದ್ಯಕೀಯ ನೆರವು ಒದಗಿಸಲು ಭಾರತಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭಾರತಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷರ ವಿಶೇಷ ಸಲಹಾಗಾರ ಬಾಸಿಲ್ ರಾಜಪಕ್ಸೆ ಅವರು ಭರವಸೆ ನೀಡಿದ ನಂತರ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ರವಿವಾರ ತುರ್ತು ಸಭೆ ನಡೆಸಿದ್ದರು.ಯುಪಿಎ ಸರಕಾರಕ್ಕೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲ ಎಂಬುದಾಗಿ ಕರುಣಾನಿಧಿ ಅವರು ತನಗೆ ಭರವಸೆ ನೀಡಿದ್ದಾರೆ ಎಂಬುದಾಗಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.ಶ್ರೀಲಂಕಾ ಉತ್ತರ ಭಾಗದಲ್ಲಿನ ಸಂತ್ರಸ್ತ ತಮಿಳರಿಗೆ ಸುಮಾರು 800 ಟನ್ ಪರಿಹಾರ ಉತ್ಪನ್ನಗಳನ್ನು ಒದಗಿಸಲು ಭಾರತವು ನಿರ್ಧರಿಸಿದ್ದು, ಇದಕ್ಕೆ ಶ್ರೀಲಂಕಾವು ಸಮ್ಮತಿ ನೀಡಿದೆ ಎಂದು ಅವರು ಹೇಳಿದ್ದಾರೆ. |
|