ಸೋಮವಾರ ಮುಂಬೈ ನಗರಸಾರಿಗೆ ಬಸ್ಸಿನಲ್ಲಿ ಗುಂಡು ಹಾರಾಟ ನಡೆಸಿ ಬಳಿಕ ಪೊಲೀಸರ ಗುಂಡಿಗೆ ಬಲಿಯಾದ ಯುವಕ, "ತಾನು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಮುಗಿಸಲು ಬಂದಿದ್ದೇನೆ" ಎಂಬುದಾಗಿ ಕಿರುಚಾಡುತ್ತಲೇ ಇದ್ದ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಹೇಳಿದ್ದಾರೆ.
ಪಟ್ನಾದ 23ರ ಹರೆಯದ ಯುವಕ ರಾಹುಲ್ ರಾಜ್ ಎಂಬಾತ ಡಬ್ಬಲ್ ಡೆಕ್ಕರ್ ಬಸ್ಸಿಗೇರಿದ್ದು, ತನಗೆ ಪ್ರಯಾಣಿಕರ ಮೇಲೆ ಯಾವುದೇ ದ್ವೇಷವಿಲ್ಲ, ತನಗೆ ಬೇಕಿರುವುದು ರಾಜ್ ಠಾಕ್ರೆ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ತಾನು ರಾಜ್ ಠಾಕ್ರೆಯ ಮೇಲೆ ದಾಳಿ ಮಾಡಲು ಬಂದಿರುವುದಾಗಿ ಚೀಟಿ ಬರೆದು ಬಸ್ಸಿನಿಂದ ಹೊರಗೆಸೆಯುವಂತೆ ಕೆಲವು ಪ್ರಯಾಣಿಕರನ್ನು ಒತ್ತಾಯಿಸಿದ. ಆತ ಒಂದು ಮೊಬೈಲ್ ಪೋನ್ ನೀಡುವಂತೆಯೂ ಪ್ರಯಾಣಿಕರನ್ನು ಪೀಡಿಸಿದ್ದ ಎಂದು ಅವರು ತಿಳಿಸಿದ್ದಾರೆ.
"ತಾನು ಮೇಲಿನ ಡೆಕ್‌ನಲ್ಲಿ ಕುಳಿತಿದ್ದೆ. ಕೆಳಗೆ ಗಲಾಟೆ, ಕಿರುಚಾಟ ಕೇಳಿಬರುತ್ತಿತ್ತು. ಏನಾಯಿತೆಂದು ನೋಡಬೇಕಿದ್ದರೆ, ರಾಹುಲ್ ರಾಜ್ ತನ್ನ ಕೈಯಲ್ಲಿದ್ದ ಒಂದು ವಿಧದ ಚೈನ್‌ನಿಂದ ನಿರ್ವಾಹಕನ ಕತ್ತು ಹಿಸುಕುತ್ತಿದ್ದ. ಉನ್ಮತ್ತನಂತೆ ವರ್ತಿಸುತ್ತಿದ್ದ ಆತ ಬಳಿಕ ಪ್ರಯಾಣಿಕರತ್ತ ವಿನಾಕಾರಣ ಗುಂಡು ಹಾರಿಸಿದ" ಎಂದು ತನ್ನ ಭಯಾನಕ ಅನುಭವವನ್ನು ಅಬ್ದುಲ್ ರಶೀದ್ ಶೇಕ್ ಹೇಳಿಕೊಂಡಿದ್ದಾರೆ.
ರಾಹುಲ್ ರಾಜ್, ತಾನು ನಗರ ಪೊಲೀಸ್ ಆಯುಕ್ತರ ಬಳಿ ಮಾತನಾಡಬೇಕು ಎಂದು ಪದೇಪದೇ ಹೇಳುತ್ತಿದ್ದ, ಅಲ್ಲದೆ ತಾನು ರಾಜ್ ಠಾಕ್ರೆಯನ್ನು ಕೊಲ್ಲಬಯಸುವುದಾಗಿಯೂ ಹೇಳುತ್ತಿದ್ದ ಎಂದು ಪೊಲೀಸ್ ಉಪಾಯುಕ್ತ ಮಿಲಿಂದ್ ಭರಂಬೆ ಹೇಳಿದ್ದಾರೆ.
"ತನಗೆ ರಾಜ್ ಠಾಕ್ರೆಯನ್ನು ಮಾತ್ರ ಕೊಲ್ಲಬೇಕಾಗಿದೆ, ಇನ್ಯಾರನ್ನೂ ಅಲ್ಲ" ಎಂದು ಬರೆದಿದ್ದ ಹತ್ತು ಮತ್ತು ಐವತ್ತು ರೂಪಾಯಿಯ ಎರಡು ನೋಟುಗಳು ಬಸ್ಸಿನ ಹೊರಗಡೆ ಬಿದ್ದಿತ್ತು ಎಂದು ಭರಂಬೆ ತಿಳಿಸಿದ್ದಾರೆ. |