ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
ಮಾಲೆಗಾಂವ್ ಮತ್ತು ಮೊದಾಸಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿರುವ ಎಬಿವಿಪಿಯ ಮಾಜಿ ಕಾರ್ಯಕರ್ತೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಜತೆಗಿನ "ಸಂಬಂಧ" ವಿಷಯವನ್ನು ಹೇಗೆ ನಿರ್ವಹಿಸಬೇಕೆಂದು ಸಂಘ ಪರಿವಾರವು ತಲೆಕೆಡಿಸಿಕೊಂಡಿರುವಂತೆಯೇ, ಆಕೆಯ ಕೌಟುಂಬಿಕ ಹಿನ್ನೆಲೆಯು ಇತರ ಪಕ್ಷಗಳಿಗೂ ತೀವ್ರ ತಲೆನೋವುಂಟು ಮಾಡುವ ಸಾಧ್ಯತೆಗಳಿವೆ.

ತಾನೊಬ್ಬ ದೀರ್ಘ ಕಾಲದ ಕಾಂಗ್ರೆಸ್‌ನ ತಳಮಟ್ಟದ ಕಾರ್ಯಕರ್ತನಾಗಿದ್ದೆ ಎಂದು ಪ್ರಗ್ಯಾ ಸಿಂಗ್‌ಳ ತಂದೆ, ಆಯುರ್ವೇದ ವೈದ್ಯ ಚಂದ್ರಪಾಲ ಸಿಂಗ್ ಠಾಕೂರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ತುರ್ತುಪರಿಸ್ಥಿತಿಯವರೆಗೂ ತಾನು ಇಂದಿರಾ ಗಾಂಧಿಯನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಿದ್ದೆ ಎಂದಿರುವ ಅವರು, ಆ ಸಮಯದಲ್ಲಿ ನಡೆದ ದೌರ್ಜನ್ಯ, ಹಿಂಸಾಚಾರ ಇತ್ಯಾದಿಗಳು ತಾನು ಆರೆಸ್ಸೆಸ್‌ನತ್ತ ಸೆಳೆಯಿತು ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ಅವರ ಕಾಂಗ್ರೆಸ್ ಸರಕಾರದಲ್ಲಿ ಸಹಾಯಕ ಗೃಹ ಸಚಿವರಾಗಿದ್ದ ಗೋವಿಂದ ಸಿಂಗ್, ತನ್ನ ಮಿತ್ರರೂ ಆಗಿದ್ದರು ಮತ್ತು ಮಗಳಿಗೆ ಭಿಂಡ್‌ನಲ್ಲಿ ಸರಕಾರಿ ಶಿಕ್ಷಕಿಯ ಹುದ್ದೆ ದೊರಕಿಸುವ ಭರವಸೆ ನೀಡಿದ್ದರು. ಆದರೆ ಆಕೆ ನಿರಾಕರಿಸಿದ್ದಳು ಎಂದು ಚಂದ್ರಪಾಲ್ ಠಾಕೂರ್ ಹೇಳಿದ್ದಾರೆ.

ಮುಂಬಯಿಯ ಭಯೋತ್ಪಾದನಾ ನಿಗ್ರಹ ದಳವು ಪ್ರಗ್ಯಾಳನ್ನು ಸೂರತ್‌ನಿಂದ ವಶಕ್ಕೆ ತೆಗೆದುಕೊಂಡಿತ್ತು. ಇದುವರೆಗೆ ತಾನು ಸಹಾಯಕ್ಕಾಗಿ ಯಾರನ್ನೂ ಸಂಪರ್ಕಿಸಿಲ್ಲ ಎಂದಿರುವ ಚಂದ್ರಪಾಲ್ ಠಾಕೂರ್, ಪ್ರಗ್ಯಾಳ 'ಜೈ ವಂದೇ ಮಾತರಂ' ಸಂಘಟನೆಯು ಮಹಿಳಾ ರಕ್ಷಣೆಗಾಗಿ ರಚಿಸಲಾಗಿತ್ತು. ಬೇರೆ ಸಮುದಾಯದವರೊಂದಿಗೆ ಓಡಿ ಹೋಗುತ್ತಿದ್ದ ತರುಣಿಯರನ್ನು ರಕ್ಷಿಸುವುದು, ಸಾಧ್ಯವಾದರೆ ಅವರನ್ನು ಮರಳಿ ಕುಟುಂಬದ ಜತೆ ಒಂದುಗೂಡಿಸುವುದು ಈ ಸಂಘಟನೆಯ ಕಾರ್ಯವಾಗಿತ್ತು ಎಂದವರು ವಿವರಿಸಿದ್ದಾರೆ. ಈ ಹುಡುಗಿಯರನ್ನು ಸೂಕ್ತವಾದ ಹಿಂದೂ ಹುಡುಗರಿಗೆ ವಿವಾಹ ಮಾಡಿಸಿಕೊಡಲಾಗುತ್ತಿತ್ತು. ಎಲ್ಲ ಖರ್ಚನ್ನೂ ಈ ಸಂಘಟನೆಯೇ ಭರಿಸುತ್ತಿತ್ತು ಎಂದವರು ವಿವರಿಸಿದ್ದಾರೆ.

ಕಾಂಗ್ರೆಸ್‌ನಲ್ಲಿನ ದಿನಗಳ ಬಗ್ಗೆ ಹೇಳಿದ ಠಾಕೂರ್, "ಇಂದಿರಾ ಗಾಂಧಿ ಮತ್ತು ಆಕೆಯ ಸಿದ್ಧಾಂತಗಳೇ ತನ್ನನ್ನು ಬಹುವಾಗಿ ಆಕರ್ಷಿಸಿತ್ತು. ಭಿಂಡ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿಯುತ್ತಿದ್ದೆ. ನನಗೆ ಆಗ 30 ವರ್ಷ. ಪಕ್ಷದ ಕಚೇರಿಯು ಇಂದಿರಾ ಸಿದ್ಧಾಂತಗಳನ್ನೊಳಗೊಂಡ ಸಾಹಿತ್ಯವನ್ನು ನಮಗೆ ವಿತರಿಸುತ್ತಿತ್ತು. ಒಂದು ವಿಷಯ ಮಾತ್ರ ಸಾಮಾನ್ಯವಾಗಿತ್ತು: ಆಕೆ ಆರೆಸ್ಸೆಸ್ಸನ್ನು, ಅದರ ಕಾರ್ಯವೈಖರಿಯನ್ನು ಮತ್ತು ಸಿದ್ಧಾಂತವನ್ನು ಬಹುವಾಗಿ ದ್ವೇಷಿಸುತ್ತಿದ್ದರು. ಆ ಬಳಿಕ, ನಾನೂ ಅದನ್ನು ದ್ವೇಷಿಸತೊಡಗಿದೆ. ಆ ಕಾಲದಲ್ಲಿ ಭಿಂಡ್ ಜಿಲ್ಲೆಯ ನಮ್ಮ ಲೆಹರ್ ಗ್ರಾಮದಲ್ಲೂ ಆರೆಸ್ಸೆಸ್ ಸಕ್ರಿಯವಾಗಿತ್ತು" ಎಂದು ಅವರು ವಿವರಿಸಿದ್ದಾರೆ.

"ಆನಂತರ, ಆರೆಸ್ಸೆಸ್‌ನ ಮಾಸಿಕ ಪತ್ರಿಕೆಯೊಂದು ತನ್ನ ಕೈಸೇರಿತ್ತು. ಇಂದಿರಾ ಗಾಂಧಿಯೇಕೆ ಆರೆಸ್ಸಸ್ಸನ್ನು ದ್ವೇಷಿಸುತ್ತಿದ್ದರು ಎಂದು ತಿಳಿದುಕೊಳ್ಳುವುದಕ್ಕಾಗಿ ತಾನು ಅದನ್ನು ಆ ರಾತ್ರಿಯಿಡೀ ಸಮಗ್ರವಾಗಿ ಓದಿದೆ. ಅದನ್ನು ಓದಿದ ನಂತರ, ನನ್ನ ಮನಸ್ಸಿನಲ್ಲಿದ್ದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಸಂಘವನ್ನು ಮತ್ತಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಆರೆಸ್ಸೆಸ್ ಮುಖಂಡರ ಮಿತ್ರತ್ವ ಗಳಿಸಿದೆ" ಎಂದೂ ಅವರು ಹೇಳಿದ್ದಾರೆ.

ಪ್ರಗ್ಯಾ ಸಿಂಗ್ ಕಾಲೇಜು ದಿನಗಳಿಂದಲೂ ಎಬಿವಿಪಿಯೊಂದಿಗೆ ಗುರುತಿಸಿಕೊಂಡು, ತನ್ನ ವಾಕ್ಚಾತುರ್ಯಕ್ಕಾಗಿ ಹೆಸರು ಗಳಿಸಿದ್ದಳು. ಹಿಂದುತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವತ್ತೂ ಆಕೆ ಮುಂದಿರುತ್ತಿದ್ದಳು. ಭಿಂಡ್ ಜಿಲ್ಲೆಯ ಲಹರ್ ಎಂಬ ಗ್ರಾಮದವಳಾಗಿದ್ದ ಈಕೆಯ ಹೆಸರಿನಲ್ಲಿ ನೋಂದಾವಣೆಗೊಂಡಿದ್ದ ಮೋಟಾರು ಬೈಕು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಳಸಲಾಗಿತ್ತು. ಹುಡುಗರಂತೆಯೇ ಕಾಣಿಸುತ್ತಿದ್ದ ಪ್ರಗ್ಯಾ ಸಿಂಗ್, ರಾಜ್ಯ ಮಟ್ಟದ ಎಬಿವಿಪಿ ಕಾರ್ಯಕರ್ತೆಯಾಗಿ ಬೆಳೆದು, ಬಳಿಕ ಅದನ್ನು ತ್ಯಜಿಸಿ ಸನ್ಯಾಸಿನಿಯಾಗಿದ್ದಳು. ಧಾರ್ಮಿಕ ಬೋಧನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಆಕೆಯ ತಂದೆ ಠಾಕೂರ್ ಅವರ ಕಾಲಾನಂತರದಲ್ಲಿ ಮಧ್ಯಪ್ರದೇಶದಿಂದ ಗುಜರಾತಿನ ಸೂರತ್‌ಗೆ ಬಂದು ನೆಲಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಟೀಲ್‌ಗೆ ಬಿಹಾರ ಮುಖ್ಯಮಂತ್ರಿ ತಿರುಗೇಟು
ಮಾಲೆಗಾಂವ್ ಪ್ರಕರಣ ಭಯಾನಕ: ಕಾಂಗ್ರೆಸ್
ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
ಪ್ರಯಾಣಿಕರಿಗೆ ಗುಂಡಿಕ್ಕಿದಾತ ಪೊಲೀಸ್ ಗುಂಡುದಾಳಿಗೆ ಬಲಿ
ಯುಪಿಎ ಸರಕಾರಕ್ಕೆ ಸಮಸ್ಯೆ ನೀಡುವುದಿಲ್ಲ:ಡಿಎಂಕೆ