ಉತ್ತರ ಭಾರತ ವಿರೋಧಿ ಚಳುವಳಿಯಿಂದ ಉಂಟಾಗಿರುವ ವಿವಾದಕ್ಕೆ ತುಪ್ಪ ಸುರಿಯದಿರಿ ಎಂದು ಬಿಹಾರದ ರಾಜಕೀಯ ನಾಯಕರಿಗೆ ಹೇಳಿರುವ ಶಿವಸೇನಾ ನಾಯಕ ಉದ್ಭವ್ ಠಾಕ್ರೆ, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಮಹಾರಾಷ್ಟ್ರ ವಿದ್ಯಮಾನದಲ್ಲಿ ಮೂಗು ತೂರಿಸಬಾರದು ಎಂದು ಹೇಳಿದ್ದಾರೆ.
ಮುಂಬೈಯಲ್ಲಿರುವ ಉತ್ತರ ಭಾರತೀಯರ ಪರಿಸ್ಥಿತಿಯ ಕುರಿತು ಹೇಳಿಕೆ ನೀಡುತ್ತಾ ಬಿಹಾರದ ನಾಯಕರು ಬೆಂಕಿಗೆ ತುಪ್ಪ ಸುರಿಯಬಾರದು ಎಂದು ಅವರು ಹೇಳಿದ್ದಾರೆ. ಸೇನಾವನ್ನು ನಿಷೇಧಿಸಬೇಕು ಎಂಬ ಲಾಲೂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಬಿಹಾರ ಜನತೆಯ 'ನೈಜ' ವೈರಿಗಳೆಂದರೆ ಅವರದ್ದೇ ಆದ ನಾಯಕರು ಎಂದು ಹೇಳಿದ್ದಾರೆ.
"ತಮ್ಮ ರಾಜ್ಯದ ಜನತೆ ಜೀವನ ನಡೆಸಲು ಯಾಕೆ ಮುಂಬೈಗೆ ತೆರಳುತ್ತಾರೆ ಎಂಬುದನ್ನು ಬಿಹಾರದ ನಾಯಕರು ಸ್ವಯಂ ಪ್ರಶ್ನಿಸಿಕೊಳ್ಳಲಿ" ಎಂಬುದಾಗಿ ಉದ್ಭವ್ ಠಾಕ್ರೆ ಮಾರ್ಮಿಕವಾಗಿ ಹೇಳಿದ್ದಾರೆ.
"ಲಾಲು ಅವರು ಮಹಾರಾಷ್ಟ್ರ ವಿದ್ಯಮಾನದಲ್ಲಿ ಮೂಗು ತೂರಿಸದಿರಲಿ ಎಂಬುದಾಗಿ ಸಲಹೆ ಮಾಡುತ್ತೇನೆ" ಎಂದು ಉದ್ಭವ್ ಠಾಕ್ರೆ ಹೇಳಿದ್ದಾರೆ.
ಸೋಮವಾರದ ಬಿಹಾರಿ ಯುವಕನ ಗುಂಡು ಹಾರಾಟ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, "ಆತ ತನ್ನ ಕೈಯಲ್ಲಿ ಪಿಸ್ತೂಲ್ ಹೊಂದಿದ್ದು ಯಾರನ್ನಾದರೂ ಕೊಲ್ಲುವ ಸಾಧ್ಯತೆ ಇತ್ತು. ಪೊಲೀಸರು ಒತ್ತಡದಲ್ಲಿದ್ದ ಕಾರಣ ಅವರು ಇನ್ನೇನು ಮಾಡಬಹುದಿತ್ತು" ಎಂಬುದಾಗಿ ಪ್ರಶ್ನಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಸಂಪರ್ಕದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಉದ್ಭವ್, ಬಂಧಿತರು ಇದರಲ್ಲಿ ಪಾಲ್ಗೊಂಡಿರುವುದು ಇನ್ನಷ್ಟೆ ಸಾಬೀತಾಗಬೇಕಿದೆ, ಆದರೆ ತಾನವರನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ. |