ಸೆಪ್ಟೆಂಬರ್ 29ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ ಮತ್ತು ಇತರ ಎರಡು ಮಂದಿಯನ್ನು ಬಂಧಿಸಿದ ಐದು ದಿನಗಳ ನಂತರ, ಮತ್ತಿಬ್ಬರನ್ನು ಮಂಗಳವಾರ ಬಂಧಿಸಲಾಗಿದೆ.
ಬಂಧಿತರಲ್ಲಿ ಒಬ್ಬರನ್ನು ಮಾಜಿ ಸೇನಾ ಅಧಿಕಾರಿ ಪೂನಾದ ಮೇಜರ್ ರಮೇಶ್ ಉಪಾಧ್ಯಾಯ್ ಮತ್ತು ಮಧ್ಯಪ್ರದೇಶದ ಇಂದೋರ್‌ನ ಸಮೀರ್ ಕುಲಕರ್ಣಿ ಎಂದು ಗುರುತಿಸಲಾಗಿದೆ.
ಬಂಧಿತರನ್ನು ನಾಸಿಕ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬುಧವಾರ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೂನಾದ ಅಭಿನವ್ ಭಾರತ್ ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಉಪಾಧ್ಯಾಯ್ ಅವರನ್ನು ಅವರ ನಿವಾಸದಿಂದ ಬಂಧಿಸಲಾಗಿತ್ತು.
ಭಯೋತ್ಪಾದನೆಯನ್ನು ನಿರ್ಮೂಲನಗೊಳಿಸಿ ಹಿಂದೂ ಸಂಸ್ಕೃತಿಯಂತೆ ದೇಶವನ್ನು ಮರುನಿರ್ಮಿಸುವ ಗುರಿಯೊಂದಿಗೆ ಈ ಸಂಘಟನೆಯನ್ನು 2006ರಲ್ಲಿ ರಚಿಸಲಾಗಿತ್ತು ಎಂದು ಸಂಘಟನೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಇನ್ನೋರ್ವ ಬಂಧಿತ ವ್ಯಕ್ತಿಯಾಗಿರುವ ಕುಲಕರ್ಣಿ ಅವರಿಗೂ ಅಭಿನವ್ ಭಾರತ್ ಜೊತೆ ಸಂಪರ್ಕವಿತ್ತಲ್ಲದೆ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮಾಜಿ ಸದಸ್ಯರೂ ಆಗಿದ್ದರು.
ಸುಮಾರು ಆರು ಮಂದಿಯ ಸಾವಿಗೆ ಕಾರಣವಾದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆದ ಬಾಂಬ್ ಸ್ಫೋಟದ ಸಂಬಂಧ 38 ವರ್ಷದ ಸಾಧ್ವಿ ಸೇರಿದಂತೆ ಮೂರು ಮಂದಿಯನ್ನು ಕಳೆದ ಗುರುವಾರ ಬಂಧಿಸಲಾಗಿತ್ತು. |