ಮುಂಬೈ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆಗೆ ಗುಂಪೊಂದರಿಂದ ಹಲ್ಲೆಗೀಡಾಗಿ ಉತ್ತರ ಪ್ರದೇಶದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆಯ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಒತ್ತಾಯಿಸಿದ್ದಾರೆ.
ಧರ್ಮದೇವ್ ರಾಯ್ ಎಂಬ ಯುವಕ ಇತರ ಮೂರು ಮಂದಿಯೊಂದಿಗೆ ಮಂಗಳವಾರ ರೈಲಿನಲ್ಲಿ ಸಾಗುತ್ತಿದ್ದ ವೇಳೆ ಸುಮಾರು 10ರಿಂದ 12ರಷ್ಟಿದ್ದ ಮರಾಠಿ ಮಾತನಾಡುತ್ತಿದ್ದ ಮಂದಿಯ ತಂಡವೊಂದರೊಂದಿಗೆ ಮಾತಿನ ಚಕಮಕಿ ಉಂಟಾಗಿತ್ತು. ಸಿಟ್ಟಿಗೆದ್ದ ತಂಡವು ರಾಯ್ ಹಾಗೂ ಇತರ ಮೂವರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಹಾನಿಗೀಡಾಗಿದ್ದ ಧರ್ಮದೇವ್, ಬಳಿಕ ದುಬೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಉತ್ತರ ಪ್ರದೇಶದ ಈ ಯುವಕರು ತಮ್ಮ ಊರಿಗೆ ಹೊರಟಿದ್ದು, ಚತ್ರಪತಿ ಶಿವಾಜಿ ಟರ್ಮಿನಸ್‌ಗೆ ತೆರಳುತ್ತಿದ್ದರು.
ಪ್ರಧಾನಿಯವರಿಗೆ ಈ ಕುರಿತು ಪತ್ರ ಬರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು, ತಕ್ಷಣವೇ ಕೇಂದ್ರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರಿಗೂ ಮಾಯಾವತಿ ಪತ್ರ ಬರೆದಿದ್ದಾರೆ.
ಏತನ್ಮಧ್ಯೆ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳೆರಡೂ ಮೃತ ಯುವಕನ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಅವರೂ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಹಾಗೂ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದು, ಪ್ರಕರಣದ ಕುರಿತು ವರದಿಗೆ ಒತ್ತಾಯಿಸಿದ್ದಾರೆ.
ತಮ್ಮ ಸರಕಾರವು ವಲಸಿಗರ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ಮಂಗಳವಾರದ ಈ ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆರ್.ಅರ್.ಪಾಟೀಲ್ ಭರವಸೆ ನೀಡಿದ್ದಾರೆ.
10 ಎಂಎನ್ಎಸ್ ಕಾರ್ಯಕರ್ತರ ಬಂಧನ ಏತನ್ಮಧ್ಯೆ, ಮಂಗಳವಾರದ ಘಟನೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್)ಯ 10 ಕಾರ್ಯಕರ್ತರನ್ನು ಸರಕಾರಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸಲೂ ಮಹಾರಾಷ್ಟ್ರ ಸರಕಾರ ಆದೇಶವಿತ್ತಿದೆ.
ಈ ದುರಂತಕ್ಕೆ ಪ್ರತಿಕ್ರಿಯಿಸಿರುವ ದೇಶ್‌ಮುಖ್ ಅವರು ಈ ಘಟನೆಯು ದುರದೃಷ್ಟಕರ ಹಾಗೂ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಸರಕಾರವು ಉತ್ತರ ಭಾರತೀಯರಿಗೆ ಅಗತ್ಯ ರಕ್ಷಣೆಯನ್ನು ಒದಗಿಸಲಿದೆ. ಅವರು ಚಿಂತಿಸುವ ಅಗತ್ಯವಿಲ್ಲ. ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಮುಖ್ಯಕಾರ್ಯದರ್ಶಿಯವರಿಗೆ ಆದೇಶ ನೀಡಿರುವುದಾಗಿ ದೇಶ್‌ಮುಖ್ ಹೇಳಿದ್ದಾರೆ.
ಈ ಮಧ್ಯೆ, ಬಂಧನಕ್ಕೀಡಾಗಿರುವ ತನ್ನ ಮೂವರು ಬೆಂಬಲಿಗರನ್ನು ಈಗಾಗಲೆ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಲಾಗಿದೆ ಎಂದು ಎಂಎನ್ಎಸ್ ಹೇಳಿದೆ.
ವೀರೇದಂರ್ ರಾಮ್‌ಗೋಪಾಲ್ ವರ್ಮಾ, ಸತ್ಯಪ್ರಕಾಶ್ ಕೌಶಲ್ ರಾಯ್ ಮತ್ತು ಶಿವಕುಮಾರ್ ವರ್ಮಾ ಹಾಗೂ ಸಾವಿಗೀಡಾದ ಧರ್ಮದೇವ್ ಅವರುಗಳು ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಗೌರಿ ಘಾಟ್‌ಗೆ ಸೇರಿದವರಾಗಿದ್ದಾರೆ. ಇವರು ಖೊಪೋಲಿಯ ಫ್ಯಾಕ್ಟರಿಯೊಂದರ ಕಾರ್ಮಿಕರಾಗಿದ್ದು, ದೀಪಾವಳಿ ವೇಳೆ ಊರಿಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
|