ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೀಡಾಗಿರುವ ಮಾಜಿ ಸಿಬ್ಬಂದಿಗಳಿಬ್ಬರನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಲಾಗಿದೆ.
ಬಂಧನಕ್ಕೀಡಾಗಿದ್ದ ಸಮೀರ್ ಕುಲಕರ್ಣಿ ಹಾಗೂ ರಮೇಶ್ ಉಪಾಧ್ಯಾಯ ಎಂಬಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಇವರನ್ನು ಪೊಲೀಸ್ ವಶಕ್ಕೆ ನೀಡಿದೆ.
ಸ್ಫೋಟದ ನೀಲಿ ನಕಾಶೆಯನ್ನು ನಾಸಿಕ್‌ನ ಭೋಂಸ್ಲೆ ಮಿಲಿಟರಿ ಕಾಲೇಜಿನಲ್ಲಿ ತಯಾರಿಸಲಾಗಿತ್ತು ಎಂದು ವಿಚಾರಣೆ ವೇಳೆ ಸರಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಐದು ಮಂದಿಯ ಸಾವಿಗೆ ಕಾರಣವಾಗಿದ್ದ ಮಾಲೆಗಾಂವ್ ಸ್ಫೋಟದಲ್ಲಿ ತನ್ನ ಪಾತ್ರ ಏನೇನೂ ಇಲ್ಲ ಎಂಬುದಾಗಿ ರಮೇಶ್ ಉಪಾಧ್ಯಾಯ ಅವರು ತನ್ನ ಮೇಲಿನ ಆರೋಪವನ್ನು ಅಲ್ಲಗಳೆದರು. ತಾನೊಬ್ಬ ದೇಶಭಕ್ತನಾಗಿದ್ದು, ಸ್ಫೋಟದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರೊಂದಿಗೆ ತಾನು ಮಾತನಾಡಿರುವುದು ಹೌದು ಎಂದು ಅವರು ಒಪ್ಪಿಕೊಂಡರು.
ತಾನು ಪ್ರಗ್ಯಾ ಸಿಂಗ್ ಜತೆಯಲ್ಲಿ ಕೇವಲ ಒಂದು ಬಾರಿ ಮಾತನಾಡಿದ್ದು, ಮೂರು ಬಾರಿ ವೇದಿಕೆ ಹಂಚಿಕೊಂಡಿರುವುದಾಗಿ ಉಪಾಧ್ಯಾಯ ನ್ಯಾಯಾಲಯದ ಮುಂದೆ ತಿಳಿಸಿದರು. ತಾನು ಪೊಲೀಸರಿಗೆ ತನಿಖೆಗೆ ಸಹಕರಿಸುವುದಾಗಿ ಹೇಳಿದ ಅವರು ನಾರ್ಕೋ ಅನಾಲಿಸಿಸ್ ಪರೀಕ್ಷೆಗೀಡಾಗಲೂ ಸಿದ್ಧ ಎಂದು ನುಡಿದರು.
ತನ್ನನ್ನು ಪೊಲೀಸರು ಥಳಿಸಿದರು ಎಂಬುದಾಗಿ ಹೇಳಿದ ಇನ್ನೋರ್ವ ಬಂಧಿತ ರಮೇಶ್, ಅವರು ತನ್ನ ಮೈ ಮೇಲೆ ಪೊಲೀಸರು ಥಳಿಸಿದ ಗಾಯಗಳನ್ನು ಕಾಣಬಹುದು ಎಂದು ನ್ಯಾಯಾಲಯದ ಮುಂದೆ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಂಧನಕ್ಕೀಡಾಗಿರುವ ಮೂವರೊಂದಿಗೆ ಇವರಿಗೆ ಸಂಪರ್ಕವಿದೆ ಎಂಬ ಅಂಶ ತನಿಖೆಯ ವೇಳೆ ಬಹಿರಂಗಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ಮುಂಬೈ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. |