ಮಹಾರಾಷ್ಟ್ರದಲ್ಲಿನ ಆಡಳಿತರೂಢ ಕಾಂಗ್ರೆಸ್-ಎನ್‌ಸಿಪಿ(ನ್ಯಾಷನಲ್ ಕಾಂಗ್ರೆಸ್ ಪಕ್ಷ) ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರುವಂತೆ ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಬುಧವಾರ ಆಗ್ರಹಿಸಿದ್ದಾರೆ.
ಅಲ್ಲದೇ ಉತ್ತರ ಭಾರತೀಯರ ವಿರುದ್ಧ ದಾಳಿ ನಡೆಸುತ್ತಿರುವ ಶಿವಸೇನಾ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಹಾಗೂ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ವಿಲಾಸ್ ರಾವ್ ದೇಶಮುಖ್ ನೇತೃತ್ವದ ಸರ್ಕಾರಕ್ಕೆ ಆಡಳಿತ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿರುವ ಪಾಸ್ವಾನ್, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ಹೇಳಿದ್ದಾರೆ.
ಉತ್ತರಪ್ರದೇಶದವರ ವಿರುದ್ಧ ನಡೆಸುತ್ತಿರುವ ದಾಳಿಯ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ತಿಳಿಸಿದ ಅವರು, ಆ ನಿಟ್ಟಿನಲ್ಲಿ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಪಾಸ್ವಾನ್ ರಾಹುಲ್ ರಾಜ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಘಟನೆ ಕುರಿತಂತೆ ಸರ್ವಪಕ್ಷ ನಿಯೋಗವೊಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ, ನ್ಯಾಯಾಂಗ ತನಿಖೆ ನಡೆಸುಂತೆ ಒತ್ತಾಯಿಸುವುದಾಗಿ ಹೇಳಿದರು. |