ಇತ್ತೀಚಿಗೆ ಪ್ರಜಾರಾಜ್ಯಂ ಪಕ್ಷವನ್ನು ಹುಟ್ಟು ಹಾಕಿರುವ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ, ಗುರುವಾರ ದ್ವಿತೀಯ ಹಂತದ ಜನಸಂಪರ್ಕ ಸಭೆಯನ್ನು ಆರಂಭಿಸಲಿದ್ದಾರೆ.ಅವರು ತೆಲಂಗಾಣದಿಂದ ತನ್ನ ಎಂಟು ದಿನಗಳ ರಾಜಕೀಯ ಯಾತ್ರೆಯನ್ನು ಆರಂಭಿಸಲಿದ್ದು, ಕರೀಮ್‌ನಗರ್, ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ಅವರು ಈ ಹಿಂದೆ ನೇಕಾರರೊಂದಿಗೆ ಐಕಮತ್ಯ ಪ್ರದರ್ಶಿಸುವ ನಿಟ್ಟಿನಲ್ಲಿ ಸಿರಿಸಿಲ್ಲಗೆ ಭೇಟಿ ನೀಡಿದ್ದರು. ಕಾಂಗ್ರೆಸ್ ಸರಕಾರವು ನೇಕಾರರ ಹಿತಚಿಂತನೆ ಮಾಡುತ್ತಿಲ್ಲ ಎಂಬ ಆಪಾದನೆ ಎದುರಿಸುತ್ತಿದ್ದು, ಇದನ್ನು ಎನ್‌ಕ್ಯಾಶ್ ಮಾಡಲು ಚಿರಂಜೀವಿ ಮುಂದಾಗಿದ್ದಾರೆ.ತನ್ನ ಈ ರಾಜಕೀಯ ಪ್ರವಾಸದಲ್ಲಿ ಚಿರಂಜೀವಿ ಅವರು ಪ್ರತ್ಯೇಕ ತೆಲಂಗಾಣ ಬೇಡಿಕೆ ವಿವಾದ ಹಾಗೂ ನಕ್ಸಲೀಯರ ಕುರಿತು ತನ್ನ ಪಕ್ಷದ ನಿಲುವನ್ನು ವ್ಯಕ್ತಪಡಿಸುವರೆಂದು ನಿರೀಕ್ಷಿಸಲಾಗಿದೆ.ಕರೀಂನಗರ್ ಮತ್ತು ವಾರಂಗಲ್ ಜಿಲ್ಲೆಗಳು ಪ್ರತ್ಯೇಕ ತೆಲಂಗಾಣ ಹೋರಾಟದ ಕೇಂದ್ರ ಬಿಂದುವಾಗಿದ್ದು, ಇದು ನಕ್ಸಲ್ ಬಾಹುಳ್ಯದ ಪ್ರದೇಶವೂ ಆಗಿದೆ. ಈ ತಿಂಗಳ ಆದಿಯಲ್ಲಿ ಅವರು ಆಂಧ್ರದ ಉತ್ತರ ಕರಾವಳಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪ್ರವಾಸದ ವೇಳೆ, ಗಂಟಲು ನೋವಿನ ಕಾರಣದಿಂದ ನಿಗದಿಯಾಗಿದ್ದ ಪ್ರವಾಸವನ್ನು ಎರಡು ದಿನ ಕಡಿತಗೊಳಿಸಿದ್ದರು.ಚಿರಂಜೀವಿ ಅವರ ಪ್ರಥಮ ಹಂತದ ಜನಸಂಪರ್ಕ ಸಭೆಯು ಭಾರೀ ಜನಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಭಾರಿಯ ಪ್ರವಾಸವನ್ನೂ ರಾಜಕಾರಣಿಗಳು ನಿಕಟವಾಗಿ ವೀಕ್ಷಿಸಲಿದ್ದು, ಇದರ ಆಧಾರದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ವೇಳೆಗೆ ಮೈತ್ರಿ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. |
|