ಅಸ್ಸಾಂ ಸರಣಿ ಬಾಂಬ್ ಸ್ಫೋಟವನ್ನು 'ಘೋರ ಮತ್ತು ಅವಿವೇಕಿತನದ ಅಪರಾಧ' ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಂಬ್ ಸ್ಫೋಟದ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದು, ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.' ದೇಶದ ಮೇಲೆ ವೈರತ್ವವನ್ನು ಹೊಂದಿರುವ ವ್ಯಕ್ತಿಗಳು ನಡೆಸಿರುವ ಇಂತಹ ಘೋರ ಮತ್ತು ಅವಿವೇಕದ ಕಾರ್ಯವನ್ನು ನಾನು ಖಂಡಿಸುತ್ತೇನೆ' ಎಂದು ಯುಪಿಎ ಮುಖ್ಯಸ್ಥೆ ಹೇಳಿದ್ದಾರೆ.ಅಸ್ಸಾಂನ ಗುವಾಹಟಿಯಲ್ಲಿ ಗುರುವಾರ ಮುಂಜಾನೆ ಉಂಟಾದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 61 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.ಅನೇಕ ಮುಗ್ಧ ಜನರ ಸಾವಿಗೆ ಕಾರಣವಾಗಿರುವ ಗುವಾಹಟಿ ಬಾಂಬ್ ಸ್ಫೋಟದ ಕುರಿತು ನನಗೆ ಅತೀವ ವ್ಯಥೆ ಮತ್ತು ಸಂಕಟ ಉಂಟಾಗುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಸೋನಿಯಾ ತಿಳಿಸಿದ್ದಾರೆ.ಭಯೋತ್ಪಾದಕರು ತಮ್ಮ ಕರಾಳ ಮುಖವನ್ನು ದೇಶದ ಜನತೆಗೆ ಮತ್ತೊಮ್ಮೆ ತೋರ್ಪಡಿಸಿದ್ದಾರೆ. ಈ ಭಯೋತ್ಪಾದನೆಯ ಭೀತಿಯನ್ನು ಹೊಡೆದೋಡಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.ಇದರೊಂದಿಗೆ, ಸ್ಫೋಟ ಬಲಿಪಶುಗಳಿಗೆ ತಕ್ಷಣದಲ್ಲಿ ಪರಿಹಾರ ಕ್ರಮವನ್ನು ನೀಡುವಂತೆ ಪ್ರಾಧಿಕಾರಕ್ಕೆ ಸೋನಿಯಾ ಸೂಚನೆ ನೀಡಿದ್ದಾರೆ. |
|