ಗುವಾಹತಿ ಸ್ಫೋಟಗಳಿಗೆ ಜಿಹಾದಿ ಸಂಘಟನೆಗಳತ್ತ ಅಸ್ಸಾಂ ಪೊಲೀಸರು ಬೆಟ್ಟು ಮಾಡುತ್ತಿದ್ದಾರೆ. ಗುವಾಹತಿಯು ಜಿಹಾದಿ ಗುಂಪುಗಳ ಆದ್ಯತಾ ಪಟ್ಟಿಯಲ್ಲಿತ್ತೆಂದು ಗುಪ್ತಚರ ವರದಿಗಳು ಹೇಳಿದ್ದವು ಎಂಬುದಾಗಿ ಸ್ಪೆಷಲ್ ಬ್ರಾಂಚ್ ಐಜಿಪಿ ಕಂಗನ್ ಶರ್ಮಾ ಹೇಳಿದ್ದಾರೆ.
"ನಮ್ಮ ಪ್ರಮುಖ ಸಂಶಯವಿರುವುದು ಜಿಹಾದಿ ಗುಂಪುಗಳ ಮೇಲೆ. ಹುಜಿ ಕೈವಾಡದ ಬಗ್ಗೆ ನಮಗೆ ಯಾವುದೇ ನಿರ್ದಿಷ್ಟ ಹಾಗೂ ತಕ್ಷಣದ ಸುಳಿವು ಲಭಿಸಿಲ್ಲ" ಎಂದು ಶರ್ಮಾ ಹೇಳಿದರು.
ಅವರು ಸ್ಥಳೀಯ ಸಂಘಟನೆಗಳ ಪಾಲ್ಗೊಳ್ಳುವಿಕೆಯನ್ನೂ ತಳ್ಳಿಹಾಕಿಲ್ಲ. ಭಯೋತ್ಪಾದನೆಯನ್ನು ಹರಡುವುದೇ ಪ್ರಮುಖ ಉದ್ದೇಶ ಎಂಬುದು ನಿಜ. ಅದಕ್ಕಾಗಿಯೇ ಅವರು ರಾದ್ಯದ ವಿವಿಧೆಡೆಯಲ್ಲಿ ಏಕಕಾಲಕ್ಕೆ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಐಜಿಪಿ ಅಭಿಪ್ರಾಯಿಸಿದ್ದಾರೆ.
ಭಾರತ-ಬಾಂಗ್ಲಾ ಗಡಿಯಲ್ಲಿ ಕಳೆದ ತಿಂಗಳು ಭದ್ರತಾಪಡೆಗಳು ಏಳು ಶಂಕಿತ ಜಿಹಾದಿಗಳನ್ನು ಗುಂಡಿಟ್ಟು ಕೊಂದಿದ್ದರು. ಬಾಂಗ್ಲಾದಿಂದ ಜಿಹಾದಿಗಳ ಹಲವಾರು ಗುಂಪುಗಳು ಅಸ್ಸಾಂಗೆ ನುಸುಳಿದ್ದು, ಗುವಾಹತಿಯು ಪ್ರಮುಖ ಗುರಿಗಳಲ್ಲಿ ಒಂದಾಗಿರುವುದು ಗುರವಾರದ ಸ್ಫೋಟಗಳಿಂದ ನಿಚ್ಚಳವಾಗಿದೆ.
ಗರುವಾರ ಸಂಜೆ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೋಯ್ ಅವರಿಗೆ ಗುಪ್ತಚರ ವೈಫಲ್ಯವನ್ನು ಅಲ್ಲಗಳೆಯುವುದನ್ನು ಹೊರತುಪಡಿಸಿದರೆ ಹೆಚ್ಚಿನದೇನನ್ನೂ ಹೇಳುವುದಕ್ಕಿರಲಿಲ್ಲ. "ಗುವಾಹತಿಯಲ್ಲಿ ಸ್ಫೋಟಗಳನ್ನು ನಡೆಸಬಹುದೆಂಬ ಮಾಹಿತಿಗಳಿದ್ದವಾದರೂ, ಇಷ್ಟು ಗಂಭೀರ ದಾಳಿಯನ್ನು ನಿರೀಕ್ಷಿಸಿರಲಿಲ್ಲ" ಎಂದು ಗೋಗೋಯ್ ಹೇಳಿದ್ದರು. |