ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೋಟಾರ್‌ಕೇಡ್ ಮೇಲೆ ರಾಮನಾಥಪುರಂ ಜಿಲ್ಲೆಯಲ್ಲಿ ನಡೆಸಿರುವ ದಾಳಿ ಪ್ರಕರಣವು ಬಿಸಿಯೇರುತ್ತಿದ್ದು, ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಣ ಜಟಾಪಟಿ ತಾರಕಕ್ಕೇರುವಂತೆ ಮಾಡಿದೆ.
ಕರುಣಾನಿಧಿ ಅವರ ಮಧುರೈ ಮೂಲದ ಪುತ್ರ ಎಂ.ಕೆ.ಅಳಗಿರಿ ತನ್ನ ಕಾಲಿಗೆ ಕಲ್ಲುತೂರಿದ್ದಾರೆ ಎಂದು ಜಯಲಲಿತಾ ನೇರ ಆರೋಪ ಮಾಡಿದ್ದಾರೆ. ಕರುಣಾನಿಧಿ ಅವರ ನಿರ್ದೇಶನದ ಮೇಲೆ ಅಳಗಿರಿ ಈ ಕೃತ್ಯವನ್ನೆಸಗಿದ್ದಾರೆ ಎಂದು ಜಯಾ ಹೇಳಿದ್ದರೆ, ತನ್ನ ನಾಯಕನ ಜನಪ್ರಿಯತೆಯನ್ನು ಕಂಡು ಕರುಬುತ್ತಿರುವ ಎಐಎಡಿಎಂಕೆ ಇಂತಹ ಆಪಾದನೆಗಳನ್ನು ಮಾಡುತ್ತಿದೆ ಎಂದು ಡಿಎಂಕೆ ಹೇಳಿದೆ.
ತಮ್ಮತಮ್ಮ ಪಕ್ಷಗಳ ಏಳಿಗೆಯನ್ನು ಕಂಡು ಸಹಿಸಲಾಗದೆ ಈ ದಾಳಿ ನಡೆಸಲಾಗಿದೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪಿಸಿಕೊಂಡಿವೆ. ತನ್ನ ಪಕ್ಷದ ಕುರಿತು ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಪ್ರಭಾವವನ್ನು ಡಿಎಂಕೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ. ಇತ್ತ ಆಡಳಿತ ಪಕ್ಷವು, ತನ್ನ ನಾಯಕ ಕರುಣಾನಿಧಿಯವರ ಜನಪ್ರಿಯತೆಯ ಚಾರ್ಟ್ ಏರುತ್ತಿದೆ ಎಂದು ಹೇಳುತ್ತಾ, ಶ್ರೀಲಂಕಾ ತಮಿಳರ ಸಮಸ್ಯೆಯನ್ನು ನಿಭಾಯಿಸಿರುವ ರೀತಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದು ಇದೇ ಎಐಎಡಿಎಂಕೆ ಆಪಾದನೆಗೆ ಕಾರಣ ಎನ್ನುತ್ತಿದೆ.
ಎಐಎಡಿಎಂಕೆ ಸದಸ್ಯರೇ ತನ್ನ ನಾಯಕಿಯ ಕಾರಿಗೆ ಕಲ್ಲುತೂರಿದ್ದಾರೆ ಎಂಬುದು ಡಿಎಂಕೆ ಆರೋಪ. ತಮ್ಮ ನಾಯಕಿಯ ದರ್ಶನಕ್ಕಾಗಿ ಕಾದಿದ್ದವರಿಗೆ ಪೊಲೀಸರು ಅಡ್ಡಿಯುಂಟುಮಾಡಿದಾಗ ಕೆರಳಿದ ಕಾರ್ಯಕರ್ತರು ಈ ಕೃತ್ಯಕ್ಕಿಳಿದಿದ್ದಾರೆ ಎಂದು ಅದು ಹೇಳಿದೆ. ಅಲ್ಲದೆ ಇದೀಗ ಬಂಧನಕ್ಕೀಡಾಗುವ ಭೀತಿಯಿಂದ ಜಯಾ ಇಂತಹ ತಂತ್ರಗಳನ್ನು ಹೂಡುತ್ತಿದ್ದಾರೆ ಎಂದು ಪೆರಿಯಸಾಮಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮುತ್ತುರಾಮಲಿಂಗ ತೇವರ್ ಅವರಿಗೆ ಗೌರವನಮನ ಸಲ್ಲಿಸಲು ಜಯಲಲಿತಾ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಮಾಜಿ ಪ್ರಧಾನಿ ಶ್ರೀಮತಿ ಇಂಧಿರಾ ಗಾಂಧಿಯವರ ಮೇಲೆ 1978ರಲ್ಲಿ ದಾಳಿ ಮಾಡಿದವರು ಈ ಘಟನೆಯ ಹಿಂದಿದ್ದಾರೆ ಎಂದು 'ಅಮ್ಮ' ಮೊದಲಿಗೆ ಆರೋಪಿಸಿದ್ದರು. ಬಳಿಕ ಪ್ಲೇಟ್ ಬದಲಿಸಿದ ಅವರು ಈ ದಾಳಿಯ ಹಿಂದೆ ಅಳಗಿರಿ ಅವರ ಕೈವಾಡ ಇದೆ ಎಂದು ಹೇಳಿದ್ದರು.
ಅಳಗಿರಿಯು ರಾಜ್ಯದ ದಕ್ಷಿಣ ಭಾಗದಲ್ಲಿ ತನ್ನದೇ 'ರಾಜ್ಯಭಾರ' ನಡೆಸುತ್ತಿರುವುದಾಗಿ ಹೇಳಿರುವ ಜಯಾ, ಇಲ್ಲಿನ ಸಂಪೂರ್ಣ ರಾಜಕೀಯ ಮತ್ತು ಸಾರ್ವಜನಿಕ ವಾತಾವರಣವನ್ನು ಅಳಗಿರಿ ಕೆಡಿಸಿರುವುದಾಗಿ ದೂರಿದ್ದಾರೆ.
ದುಷ್ಕರ್ಮಿಗಳನ್ನು ಆಳಗಿರಿ ಪೊಲೀಸ್ ವಾಹನದಲ್ಲಿ ಕರೆ ತಂದಿದ್ದರೆಂದು ಹೇಳಿದ ಜಯಾ, ಪೊಲೀಸರಿಗೆ ಹೇಳಿ ಅಮಾಯಕರನ್ನು ಬಂಧಿಸುವಂತೆ ಮಾಡಲಾಗಿದೆ ಎಂದು ದೂರಿದರು. ತನ್ನ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗಳ ಮೂಲಕ ಜನತೆಗೆ ತೊಂದರೆ ಉಂಟುಮಾಡಬಾರದು ಎಂದು ಹೇಳಿರುವ ಅವರು ಡಿಎಂಕೆಯ ಈ ದಾಳಿಯನ್ನು ರಾಜಕೀಯವಾಗಿ ಎದುರಿಸುವುದಾಗಿ ಹೇಳಿದರು. |